ಬಳ್ಳಾರಿ: ಅಂಧತ್ವ ಮುಕ್ತ ಬಳ್ಳಾರಿ ನಗರ ಅಭಿಯಾನದಡಿ ಮನೆ ಮನೆಗೆ ಭೇಟಿ ನೀಡಿ ಅಂಧತ್ವದಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಕನ್ನಡಕಗಳನ್ನು ವಿತರಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ದೃಷ್ಟಿ ದೋಷದಿಂದ ಬಳಲುತ್ತಿದ್ದವರಿಗೆ ಸಹಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದರು.
ನಗರದ ಪಾರ್ವತಿ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಿಯೋನಿಕ ಐ ಕೇರ್ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಅಂಧತ್ವ ಮುಕ್ತ ಬಳ್ಳಾರಿ ನಗರ ಅಭಿಯಾನ ಕಾರ್ಯಕ್ರಮದಲ್ಲಿ ಡಿಸಿ ಉಚಿತ ಕನ್ನಡಕಗಳನ್ನು ವಿತರಣೆ ಮಾಡಿ ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಈಗಾಗಲೇ ನಗರದ 9,665 ಮನೆಗಳಿಗೆ ಭೇಟಿ ನೀಡಿದ್ದಾರೆ. 1,500ಕ್ಕೂ ಹೆಚ್ಚಿನ ಜನರಿಗೆ ಕನ್ನಡಕಗಳನ್ನು ವಿತರಿಸಿದ್ದಾರೆ. ಈ ಅಭಿಯಾನವು ಸದ್ಯ ಬಳ್ಳಾರಿ ನಗರದಲ್ಲಿ ಮಾತ್ರ ನಡೆಯುತ್ತಿದ್ದು, ಇನ್ಮುಂದೆ ಜಿಲ್ಲಾದ್ಯಂತ ವಿಸ್ತರಿಸಲಾಗುತ್ತದೆ. ಒಟ್ಟಿನಲ್ಲಿ ಅಂಧತ್ವ ಮುಕ್ತ ಬಳ್ಳಾರಿ ಜಿಲ್ಲೆಯನ್ನಾಗಿಸುವುದಕ್ಕೆ ಜಿಲ್ಲಾಡಳಿತ ಪ್ರಯತ್ನ ನಡೆಸಿದೆ ಎಂದರು. ಕೋವಿಡ್ ಸಮಯದಲ್ಲಿ ತುಂಬಾ ಯಶಸ್ವಿಯಾಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರು ಅಂಧತ್ವ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿಯೂ ತಮ್ಮ ಸೇವೆಯನ್ನು ಒದಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಸಿಇಒ ನಂದಿನಿ ಕೆ. ಆರ್. ಮಾತನಾಡಿ, ಅಂಧತ್ವ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ಸುಲಭದ ಕೆಲಸವಲ್ಲ, ಅದೊಂದು ದೊಡ್ಡ ಜವಾಬ್ದಾರಿ. ದೃಢವಾದ ಕೆಲಸದಿಂದ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ. ಆರೋಗ್ಯ ಇಲಾಖೆಯು ಉತ್ತಮ ಕೆಲಸ ಮಾಡುತ್ತಿದೆ. ಅಂಧತ್ವ ಸಮಸ್ಯೆಯಿಂದ ಬಳಲುತ್ತಿರುವವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ ಅವರು ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೂ ಈ ಅಭಿಯಾನ ವಿಸ್ತರಿಸಲಾಗುವುದು ಎಂದರು.
ಈ ಸುದ್ದಿಯನ್ನೂ ಓದಿ: ನ್ಯೂ ಇಯರ್ ಸೆಲೆಬ್ರೇಷನ್ ಮುಗಿಸಿಕೊಂಡು ಮನೆಗೆ ಮರಳುವಾಗ ಕಾರು ಅಪಘಾತ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೆಚ್.ಎಲ್.ಜನಾರ್ದನ ಅವರು ಮಾತನಾಡಿ, ಈವರೆಗೆ 64 ಸಾವಿರಕ್ಕೂ ಹೆಚ್ಚಿನ ಜನರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. 8 ಆಪರೇಷನ್‍ಗಳು ನಡೆದಿವೆ. 1,400 ಜನರಿಗೆ ಕನ್ನಡಕ ವಿತರಣೆ ಮಾಡಲಾಗಿದೆ. ಮನೆಗೆ ಹೋಗಿ ಚಿಕಿತ್ಸೆ ಕೊಡುತ್ತಿದ್ದೇವೆ. ಅದು ಕೂಡ ಅವರ ಮನೆಯವರಿಗೂ ತೊಂದರೆಯಾಗದಂತೆ ಈ ಕೆಲಸ ಮಾಡಿದ್ದೇವೆ. ಜಿಲ್ಲೆಯಾದ್ಯಂತ ಅಂಧತ್ವ ನಿವಾರಣೆಗೆ ರೂಪುರೇಷೆ ಹಾಕಿಕೊಂಡಿದ್ದೇವೆ. ಇನ್ನೂ ಪರಿಣಾಮಕಾರಿಯಾಗಿ ಕಾರ್ಯ ರೂಪಕ್ಕೆ ಬರಲು ಆಶಾ ಕಾರ್ಯಕರ್ತೆಯರ ಕೆಲಸ ಮಹತ್ವವಾಗಿದೆ ಎಂದರು.