ಬಳ್ಳಾರಿ: ಮಹಾಲಯ ಅಮಾವಾಸ್ಯೆ ದಿನದಂದೇ ಜಿಲ್ಲೆಯ ಸಿರುಗುಪ್ಪ ನಗರದ ಸದಾಶಿವ ನಗರದ ನಿವಾಸಿ ಲೋಕೇಶ್ ಎಂಬುವರ ಮನೆಯ ಮುಂದೆ ವಾಮಾಚಾರ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ಟೈಲರ್ ವೃತ್ತಿಯಲ್ಲಿರುವ ಲೋಕೇಶ್ ಬಾಡಿಗೆ ಮನೆಯಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಬೆಳಗಿನಜಾವ ಮನೆ ಬಾಗಿಲು ತೆರೆದ ತಕ್ಷಣ ಈ ವಾಮಾಚಾರ ನಡೆಸಿರುವ ದೃಶ್ಯ ಕಂಡು ಬಂದಿದ್ದು, ಆತಂಕಕ್ಕೀಡಾಗಿದ್ದಾರೆ.
ಅಲ್ಲದೇ ವಾಮಾಚಾರಕ್ಕೆ ಐದು ಕೋಳಿಯನ್ನು ಬಲಿ ಕೊಡಲಾಗಿದೆ. ಮನೆಯ ಮುಂಭಾಗ ಕೋಳಿಯ ತಲೆ ಹಾಗೂ ಕಾಲುಗಳನ್ನು ಇಟ್ಟು, ದೊಡ್ಡ ಕಪ್ಪುಬಟ್ಟೆಯ ಮೇಲೆ ಅಕ್ಕಿ ಅದರ ಮೇಲೆ ತೆಂಗಿನಕಾಯಿ ಇತರ ಸಾಮಗ್ರಿಗಳೊಂದಿಗೆ ಪೂಜೆ ಮಾಡಲಾಗಿದೆ.
ಅಮವಾಸ್ಯೆ ಹಿಂದಿನ ನಡುರಾತ್ರಿ ನಡೆದಿರುವ ಈ ವಾಮಾಚಾರದ ಕೃತ್ಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ವಾಮಾಚಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ನಗರಸಭೆ ಪೌರಕಾರ್ಮಿಕರಿಗೆ ಕರೆಮಾಡಿ ಎತ್ತಿ ಬಿಸಾಡಿದ್ದಾರೆ.