ವಿಜಯನಗರ : ಬುದ್ಧಿ ಇರುವವರನ್ನು ಶೃಂಗಸಭೆಗೆ ಕರೆಯುತ್ತಾರೆ. ಬುದ್ಧಿಯೇ ಇಲ್ಲದವರನ್ನು ಶೃಂಗಸಭೆಗೆ ಹೇಗೆ ಕರೆಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ತಮಗೆ ಆಹ್ವಾನವಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ಪ್ರತಿಕ್ರಿಯಿಸಿ, ಅಂಥವರನ್ನು ಸಭೆಗೆ ಕರೆದು ಏನಾದರೂ ಮಾತನಾಡಿದರೆ ಏನು ಮಾಡುವುದು. ಬುದ್ಧಿ ಇಲ್ಲದವರನ್ನು ಕರೆದು ವಿಶ್ವದ ಮುಂದೆ ಮತ್ತೆ ಅಪಮಾನಕ್ಕೆ ಒಳಗಾಗಬೇಕಾ ಎಂದು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಇಂಡಿಯಾ ವಿವಾದ ವಿಚಾರವಾಗಿ ಮಾತನಾಡಿ, ಭಾರತ ನಮ್ಮ ದೇಶದ ಹೆಸರು. ಇಂಡಿಯಾ ನಮ್ಮ ಹೆಸರಲ್ಲ. ಇಂಡಿಯಾ ಎಂಬ ಪದ ಬ್ರಿಟೀಷರಿಂದ ಬಂದಿದೆ. ಅವರಿಗೆ ಹೆಸರು ಉಚ್ಛರಿಸಲಾಗದೇ ಹೆಸರು ಅಪಭ್ರಂಶವಾಗಿದೆ. ನಮ್ಮದು ಭಾರತ ದೇಶ, ಭಾರತವಾಗೇ ಇರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರನ್ನು ಬೆದರಿಸಲು ಆಪರೇಷನ್ ಹಸ್ತ : ಕಾಂಗ್ರೆಸ್ನಲ್ಲಿ 135 ಜನ ಶಾಸಕರಿದ್ದಾರೆ. ಜನರಿಗೆ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಚುನಾವಣೆ ನಡೆದು ಮೂರು ತಿಂಗಳು ಕಳೆದಿದೆ. ಈಗ ಕಾಂಗ್ರೆಸ್ಗೆ ಆಪರೇಷನ್ ನಡೆಸುವ ಅಗತ್ಯ ಏನಿದೆ. ಕಾಂಗ್ರೆಸ್ನವರಿಗೆ ತಮ್ಮ ಪಕ್ಷದಲ್ಲೇ ಒಡಕು ಮೂಡುತ್ತಿರುವ ಬಗ್ಗೆ ಭಯ ಉಂಟಾಗಿದೆ. ತಮ್ಮ ಸರ್ಕಾರದ ಬಗ್ಗೆಯೇ ಅವರಿಗೆ ನಂಬಿಕೆ ಇಲ್ಲ. ಬಹಳಷ್ಟು ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಮುಚ್ಚಿಹಾಕಲು ಈ ರೀತಿ ಆಪರೇಷನ್ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಹಲವು ಬಿಜೆಪಿ ನಾಯಕರು ಕಾಂಗ್ರೆಸ್ಗೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಬೆದರಿಸಲು ಹೇಳುತ್ತಿದ್ದಾರೆ. ಈ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ನಮ್ಮ ಹೈಕಮಾಂಡ್ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಯಡಿಯೂರಪ್ಪ ಅವರ ಮಾಹಿತಿ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಮಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಪಕ್ಷ ಯಾವ ನಿರ್ಣಯ ಕೈಗೊಳ್ಳುತ್ತದೆಯೇ ಅದಕ್ಕೆ ನಾವು ಬದ್ಧರಾಗಿದ್ದೇವೆ. ಎಂದು ಹೇಳಿದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಸನಾತನ ಧರ್ಮ ಭಗವಂತನಿಂದ ಸೃಷ್ಟಿಯಾಗಿದೆ. ಸನಾತನ ಧರ್ಮಕ್ಕೆ ನಾಶ ಎಂಬುದಿಲ್ಲ. ಅದು ಅನಂತ. ನಮ್ಮ ಸನಾತನ ಧರ್ಮಕ್ಕೆ ಅವಹೇಳನ ಮಾಡುವವರು ಕ್ಯಾನ್ಸರ್ ಮತ್ತು ಏಡ್ಸ್ ಇದ್ದ ಹಾಗೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ನಾಶವಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ನಮ್ಮದು ಲಿಂಗಾಯತ ಧರ್ಮ ಎಂದ ಶಾಮನೂರು ಶಿವಶಂಕರಪ್ಪ - ವಿಡಿಯೋ