ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್ಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅಧಿಕಾರ ಹಂಚಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿವೆ.
ಬಿಜೆಪಿ ಪಕ್ಷದ ಕಾಂತಲತಾ ಬಿ.ಎಂ.ಎಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ನಿಂದ ಎಲ್.ಮಂಜುನಾಥ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಈ ಮೂಲಕ ಪಟ್ಟಣ ಪಂಚಾಯತ್ ರಾಜಕೀಯ ವಲಯದಲ್ಲಿ ಹೊಸ ಅಡಿಗಲ್ಲು ಇಟ್ಟರು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕಾಂತಲತಾ ಹಾಗೂ ಕಾಂಗ್ರೆಸ್ನ ರೇಷ್ಮೆ ಸುಭಾನ್ ನಾಮಪತ್ರ ಸಲ್ಲಿಸಿದ್ದರು. ಕಾಂತಲತಾ 11 ಮತಗಳಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ರೇಷ್ಮಾ ಸುಭಾನ್ 7 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದರು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಎಲ್.ಮಂಜುನಾಥ ಹಾಗೂ ವಿಷ್ಣು ನಾಯ್ಕ ನಾಮಪತ್ರವನ್ನು ಸಲ್ಲಿಸಿದ್ದರು. ಬಿಜೆಪಿಯಿಂದ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹಾಗಾಗಿ ಎಲ್.ಮಂಜುನಾಥ 11 ಮತ ಹಾಗೂ ವಿಷ್ಣು ನಾಯ್ಕ 7 ಮತಗಳನ್ನು ಗಳಿಸಿದರು. ಸಂಸದ ವೈ.ದೇವೇಂದ್ರಪ್ಪ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಮತಚಲಾವಣೆ ಮಾಡಿದ್ದಾರೆ. ಬಿಜೆಪಿ ಸದಸ್ಯೆ ಹುಲಿಗಿಬಾಯಿ ರುದ್ರಾನಾಯ್ಕ ಗೈರಾಗಿದ್ದರು ಎಂದು ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ಹೆಚ್.ವಿಶ್ವನಾಥ ತಿಳಿಸಿದರು.
ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಎಸ್ಸಿಗೆ ಮೀಸಲು ನೀಡಲಾಗಿತ್ತು. ಈ ಮೂಲಕ ಬಿಜೆಪಿ ಪಕ್ಷದಿಂದ ಚುನಾವಣಾ ಉಸ್ತುವಾರಿ ನೇಮಿರಾಜ ನಾಯ್ಕ ಮೇಲುಗೈ ಸಾಧಿಸಿದ್ದಾರೆ. ಇನ್ನು ಸ್ಥಳೀಯ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಕೂಡ್ಲಿಗಿ ಡಿವೈಎಸ್ಪಿ ಹರೀಶ್, ಸಿಪಿಐಗಳಾಸ ಪಂಪನಗೌಡ, ಉಮೇಶ, ಮರಿಯಮ್ಮನಹಳ್ಳಿ ಪಿಐ ಎಂ.ಶಿವುಕುಮಾರ ಕರ್ತವ್ಯ ನಿರ್ವಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಚುನಾವಣೆ ವೇಳೆಯಲ್ಲಿ ಹಾಜರಿದ್ದರು. ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಗೈರಾಗಿದ್ದರು.