ಹೊಸಪೇಟೆ: ಕೊರೊನಾ ಸಾಂಕ್ರಾಮಿಕ ಕಾಯಿಲೆಯ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರು ಸೇವೆ ಸ್ಥಗಿತಗೊಳಿಸಿ ಕ್ಲಿನಿಕ್ ಗಳನ್ನು ಮುಚ್ಚುತ್ತಿದ್ದಾರೆ. ಯಾರು ಆಸ್ಪತ್ರೆ ಮುಚ್ಚುತ್ತಾರೆ ಅಂತಹವರ ಲೈಸೆನ್ಸ್ ರದ್ದುಗೊಳಿಸಲು ಆರೋಗ್ಯ ಸಚಿವರಿಗೆ ಮನವಿ ಮಾಡುತ್ತೇನೆ ಎಂದು ಶಾಸಕ ಭೀಮಾ ನಾಯಕ್ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ಪಟ್ಟಣ ಪಂಚಾಯತಿ ಆವರಣದಲ್ಲಿ ಹೋಬಳಿ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಅಗತ್ತ ವಸ್ತುಗಳ ಖರೀದಿಗೆ ಪ್ರತಿದಿನ ನಾಲ್ಕು ಗಂಟೆಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಮುಗಿಸಿಕೊಂಡು ಮನೆಯಲ್ಲೇ ಇರಿ. ಅನಾವಶ್ಯಕವಾಗಿ ಬೈಕ್ ಗಳಲ್ಲಿ ಸಂಚರಿಸಿದರೆ, ಅಂತಹವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಜಾತಿ, ಧರ್ಮ, ವರ್ಗಗಳನ್ನು ಬದಿಗಿಟ್ಟು ಎಲ್ಲರೂ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದರು.
ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯ ಬಡ ಕುಟುಂಬಗಳಿಗೆ ಗುರುವಾರ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ತಮ್ಮ ಸ್ವಂತ ಹಣದಲ್ಲಿ ವಿತರಿಸಲಾಗುವುದು. ಮರಿಯಮ್ಮನಹಳ್ಳಿ ಪಟ್ಟಣಕ್ಕೆ 1500 ಕಿಟ್ ಗಳು, ಹಗರಿ ಬೊಮ್ಮನಹಳ್ಳಿ ಪಟ್ಟಣಕ್ಕೆ 1500, ಕೊಟ್ಟೂರು ಪಟ್ಟಕ್ಕೆ 2000 ಕಿಟ್ ಗಳು ಸೇರಿ ಒಟ್ಟು 5000 ಕಿಟ್ ಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.