ಬಳ್ಳಾರಿ: ಕನ್ಯಾಕುಮಾರಿಯಿಂದ ಆರಂಭಗೊಂಡು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿದ್ದು, ನಾಳೆ (ಅ.15ರಂದು) ಬಳ್ಳಾರಿ ನಗರ ಪ್ರವೇಶಿಸಲಿದ್ದು, ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ.
ಬಹಿರಂಗ ಸಭೆಗೆ ಸಂಬಂಧಿಸಿದಂತೆ ಈಗಾಗಲೇ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದು, ಮುನಿಸಿಪಲ್ ಮೈದಾನದಲ್ಲಿ ಬೃಹತ್ ವೇದಿಕೆ
ಹಾಗೂ ಪೆಂಡಾಲ್ ಹಾಕಲಾಗಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಶನಿವಾರ ನಡೆಯಲಿರುವ ಸಮಾವೇಶದಲ್ಲಿ 3 ರಿಂದ 5 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಬಳ್ಳಾರಿ ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆ ಪೂರ್ಣಕುಂಭ ಹೊತ್ತ 108 ಮಹಿಳೆಯರಿಂದ ಅದ್ದೂರಿ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದ್ದಾರೆ.
ಬಹಿರಂಗ ಸಮಾವೇಶದಲ್ಲಿ ಭಾಗವಹಿಸುವ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು, ಪಾದಯಾತ್ರಿಗಳು ಹಾಗೂ ಮುಖಂಡರಿಗೆ ಊಟದ ವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ಶಾಸಕ ನಾಗೇಂದ್ರ ಅವರು, ವೈಯಕ್ತಿಕವಾಗಿ ಒಂದೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲಂ ಭವನದ ಬಳಿ ಊಟವನ್ನು ತಯಾರು ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಸಂಜೆ ಹಲಗುಂದಿಗೆ ಪ್ರವೇಶಿಲಿರುವ ಯಾತ್ರೆ: ಇಂದು ಸಂಜೆ ಬಳ್ಳಾರಿ ಜಿಲ್ಲೆಯ ಹಲಕುಂದಿಗೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಲಿದ್ದು, ಹಲಕುಂದಿ ಮಠದಲ್ಲಿ ಇಂದು ರಾಗಾ (ಅ.14) ವಾಸ್ತವ್ಯ ಹೂಡಲಿದ್ದಾರೆ. ಅ.15ರಂದು ಬೆಳಗ್ಗೆ 6.30ಕ್ಕೆ ಹಲಕುಂದಿಯಿಂದ ಪಾದಯಾತ್ರೆ ಆರಂಭವಾಗಿ ಬಳ್ಳಾರಿಗೆ ಆಗಮಿಸಲಿದೆ.
ಬೆಳಗ್ಗೆ 11 ಗಂಟೆಗೆ ಕಮ್ಮಾಭವನದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ಕ್ಕೆ ಬಳ್ಳಾರಿ ಮುನ್ಸಿಪಾಲ್ ಕಾಲೇಜ್ ಮೈದಾನದಲ್ಲಿ ರಾಗಾ ಸಮಾವೇಶಕ್ಕೆ ತೆರಳಲಿದ್ದು 3 ಗಂಟೆಯವರೆಗೆ ಸಮಾವೇಶ ಪೂರ್ಣಗೊಳ್ಳಲಿದೆ. ನಂತರದಲ್ಲಿ ಸಂಗನಕಲ್ ಗ್ರಾಮಕ್ಕೆ ತೆರಳಿ ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಮಧ್ಯಾಹ್ನ 1 ಗಂಟೆಗೆ ರಾಹುಲ್ ಸಮಾವೇಶ ಉದ್ಘಾಟಿಸಲಿದ್ದಾರೆ. ಕಾಂಗ್ರೆಸ್ ಸಮಾವೇಶಕ್ಕೆ ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಧ್ಯದ ವೇದಿಕೆಯಲ್ಲಿ ರಾಹುಲ್ ಗಾಂಧಿ ಮತ್ತು 60 ಜನ ಪ್ರಮುಖ ಮುಖಂಡರು ಕುಳಿತುಕೊಳ್ಳಲು, ಎರಡು ಬದಿಯ ವೇದಿಕೆಯಲ್ಲಿ ರಾಜ್ಯದ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ವೇದಿಕೆ ಮೇಲೆ 360 ನಾಯಕರಿಗೆ ಆಸನ ವ್ಯವಸ್ಥೆ: ಒಂದೊಂದು ಬದಿಯಲ್ಲಿ 150 ಮುಖಂಡರು ಕೂರಬಹುದಾಗಿದೆ. ವೇದಿಕೆಯ ಮೇಲೆ ಸುಮಾರು 360 ಮುಖಂಡರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 80 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ವೇದಿಕೆಯ ಮುಂದಕ್ಕೆ ಪಕ್ಷದ ಪದಾಧಿಕಾರಿಗಳು ಇನ್ನಿತರ ಮುಖಂಡರು ಕೂರಲು ಅವಕಾಶ ಕಲ್ಪಿಸಲಾಗಿದೆ. ಸಮಾವೇಶದಲ್ಲಿ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಶಿವಕುಮಾರ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಡ ಸಿಎಂ ಭೂಪೇಶ್ ಬಘೇಲ್ ಸೇರಿ ಪ್ರಮುಖರು ಭಾಗಿಯಾಗಲಿದ್ದಾರೆ.
ಒಟ್ಟು 2,055 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರಲ್ಲಿ 3 ಎಎಸ್ಪಿ, 10 ಡಿವೈಎಸ್ಪಿ, 37 ಸಿಪಿಐ, 103 ಪಿಎಸ್‌ಐ ಸೇರಿದಂತೆ 351 ಅಧಿಕಾರಿಗಳು, 1,704 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೇ 5 ಕೆಎಸ್‌ಆರ್‌ಪಿ ಮತ್ತು 10 ಡಿಎಆರ್ ತಂಡವನ್ನು ನಿಯೋಜಿಸಲಾಗಿದೆ.
ರಾಹುಲ್ ಗಾಂಧಿಗೆ ಜೆಡ್ ಪ್ಲಸ್ ಸೆಕ್ಯೂರಿಟಿ ಇರುವುದರಿಂದ ಪಾದಯಾತ್ರೆ ಹೊರಡುವ ಸ್ಥಳ, ವಾಸ್ತವ್ಯ ಇರುವ ಪ್ರದೇಶ ಮತ್ತು ಸಮಾವೇಶದ ಸ್ಥಳದಲ್ಲಿ ನಿಗಾ ವಹಿಸಲಾಗಿದ್ದು, ಡ್ರೋನ್ ಕ್ಯಾಮರಾ ಬಳಕೆ ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಇಂದು ಕೆಲಕಾಲ ಆಂಧ್ರಪ್ರದೇಶ ಪ್ರವೇಶಿಸಲಿರುವ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ'