ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾ ಪಂಚಾಯತ್ ರೂಪಿಸಿದ ಕಾರ್ಯಕ್ರಮವೊಂದು ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಬಳ್ಳಾರಿ ಜಿಲ್ಲಾ ಪಂಚಾಯತ್ನ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಉಭಯ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಕಳೆದ ಎರಡ್ಮೂರು ತಿಂಗಳ ಹಿಂದೆ ಕೋವಿಡ್ ವೇಗವಾಗಿ ಹರಡಲು ಪ್ರಾರಂಭವಾಗಿತ್ತು. ಸೋಂಕು ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ 'ಕುಟುಂಬ ಆರೋಗ್ಯ ಸಂರಕ್ಷಣಾ ಪಡೆ' ಯನ್ನು ರೂಪಿಸಿದ್ದರು.
ಮಹಾಮಾರಿ ಕಟ್ಟಿ ಹಾಕಲು ಇದೇ ಸೂಕ್ತ ಮಾರ್ಗವೆಂದು ಸಿಇಒ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದೇ ಬಿಟ್ಟರು. ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಬಳ್ಳಾರಿ ಜಿಲ್ಲಾ ಪಂಚಾಯತ್ನ ಈ ಕಾರ್ಯಕ್ರಮ ಸರ್ಕಾರದ ಗಮನಸೆಳೆದಿದ್ದು, ಆರೋಗ್ಯ ಸಂರಕ್ಷಣಾ ಪಡೆಯನ್ನು ರಾಜ್ಯವ್ಯಾಪಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಕುಟುಂಬ ಆರೋಗ್ಯ ಸಂರಕ್ಷಣಾ ಪಡೆಯಿಂದಾಗಿ ಈಗಾಗಲೇ ಜಿಲ್ಲೆಯ 444 ಗ್ರಾಮಗಳು ಕೊರೊನಾ ಮುಕ್ತವಾಗಿವೆ. 400ಕ್ಕೂ ಅಧಿಕ ಗ್ರಾಮಗಳಲ್ಲಿ 10 ಕ್ಕಿಂತ ಕಡಿಮೆ ಸೋಂಕಿತರಿದ್ದಾರೆ. ಹೀಗಾಗಿ, ಇದೇ ಮಾದರಿಯನ್ನೇ ರಾಜ್ಯದ ಉಳಿದ ಜಿಲ್ಲೆಗಳು ಅಳವಡಿಸಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿರುವುದು ಗಣಿನಾಡಿನ ಹಿರಿಮೆ ಹೆಚ್ಚಿಸುವಂತೆ ಮಾಡಿದೆ.
ಕುಟುಂಬ ಆರೋಗ್ಯ ಸಂರಕ್ಷಣಾ ಪಡೆ ಅಂದರೇನು?
ಜಿಲ್ಲಾ ಪಂಚಾಯತ್ ಸಿಇಒ ಕೆ. ನಂದಿನಿ ಅವರು ಸೋಂಕು ನಿಯಂತ್ರಿಸಲು ಆರಂಭದಲ್ಲಿ ಗ್ರಾಮ ಪಂಚಾಯತ್ ಮತ್ತು ಗ್ರಾಮ ಮಟ್ಟದಲ್ಲಿ ಎರಡು ಹಂತಗಳಲ್ಲಿ ಕಾರ್ಯ ಪಡೆ ರಚಿಸಿದ್ದರು. ಪ್ರತಿ 50 ಮನೆಗಳಿಗೆ ಓರ್ವ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿತ್ತು. ಅವರು ಮನೆ- ಮನೆಗೆ ಭೇಟಿ ನೀಡಿ ಸೋಂಕು ಲಕ್ಷಣ ಇರುವವರನ್ನು ಗುರುತಿಸಿ ಔಷಧಿ ಕಿಟ್ ನೀಡುವ ಕೆಲಸ ಮಾಡಿದ್ದಾರೆ.
ಮೂರು ದಿನದಲ್ಲಿ ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಕಡಿಮೆಯಾಗದಿದ್ದರೆ ಮೊಬೈಲ್ ವೈದ್ಯರ ತಂಡದಿಂದ ಕೋವಿಡ್ ತಪಾಸಣೆಗೆ ಒಳಪಡಿಸುತ್ತಿದ್ದರು. ಸೋಂಕು ದೃಢಪಟ್ಟವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಸ್ವಯಂ ಸೇವಕರ ತಂಡಕ್ಕೆ ಕುಟುಂಬ ಆರೋಗ್ಯ ಸಂರಕ್ಷಣಾ ಪಡೆ ಎಂದು ಹೆಸರಿಡಲಾಗಿತ್ತು.
ಉಭಯ ಜಿಲ್ಲೆಗಳ ಗ್ರಾಮಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದ ಕೊರೊನಾ ಸೋಂಕಿನ ಕಡಿವಾಣಕ್ಕೆ ಕುಟುಂಬ ಆರೋಗ್ಯ ಸಂರಕ್ಷಣಾ ಪಡೆಯನ್ನು ಜಾರಿಗೊಳಿಸಲಾಗಿತ್ತು. ಇದರಿಂದ ಗಣಿನಾಡಿನ ಹಳ್ಳಿಗಳಲ್ಲಿ ಕೊರೊನಾ ಸೋಂಕು ಹತೋಟಿಗೆ ಬಂತು. ಇದೇ ಮಾದರಿಯನ್ನು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿರುವುದು ನಮಗೆ ಅತೀವ ಸಂತಸ ಆಗಿದೆ ಎಂದು ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.