ಬಳ್ಳಾರಿ: ಕುರುಗೋಡು ತಾಲೂಕಿನ ಕೊಳೂರು ಕ್ರಾಸ್ನಲ್ಲಿ ಪಿಎಸ್ಐ ರೈತರೊಬ್ಬರಿಗೆ ಲಾಠಿಯಿಂದ ಹೊಡೆದ ಪರಿಣಾಮ ಕಾಲು ಮುರಿದಿದೆ ಎನ್ನುವುದು ಹಾಗೂ ಈ ಘಟನೆಗೆ ಪಿಎಸ್ಐ ಕ್ಷಮೆ ಕೇಳಿದ್ದಾರೆ ಎನ್ನುವ ಸುದ್ದಿಯು ಸದ್ದು ಮಾಡಿತ್ತು. ಆದರೆ ಈ ಪ್ರಕರಣವೀಗ ದಿನಕ್ಕೊಂದು ರೂಪ ಪಡೆಯುತ್ತಿದೆ. ವ್ಯಕ್ತಿಯ ಕಾಲು ಮುರುದಿರಲಿಲ್ಲ.. ಅವರು ಮೊಹರಂನಲ್ಲಿ ಅಲಾಯಿ ಕುಣಿದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿರುವ ಬೆನ್ನಲೆ ಕಾಲು ಮುರಿದಿರುವ ವ್ಯಕ್ತಿಯ ಕಡೆಯವರೊಬ್ಬರಿಗೆ ಪಿಎಸ್ಐ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಕೂಡಾ ವೈರಲ್ ಆಗಿದೆ.
ಗುರುವಾರ ಮಾಜಿ ಶಾಸಕ ಸುರೇಶ್ ಬಾಬು ಜನ್ಮದಿನದ ಬ್ಯಾನರನ್ನು ಕೋಳೂರಿನಲ್ಲಿ ದುಷ್ಕರ್ಮಿಗಳು ಹರಿದು ಹಾಕಿದ್ದರು. ಈ ಸಂದರ್ಭದಲ್ಲಿ ಕೆಲವರು ಗ್ರಾಮದಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಇದನ್ನು ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಪ್ರತಿಭಟನಾಕಾರರ ಮನವೋಲಿಕೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಕುರುಗೋಡು ಪಿಎಸ್ಐ ಮಣಿಕಂಠ ಕಾಲು ಮುರಿದು ಕೊಂಡಿದ್ದ ವ್ಯಕ್ತಿಯ ಸಂಬಂಧಿಯೊಬ್ಬನಿಗೆ ಕಪಾಳ ಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆ ದೃಶ್ಯವನ್ನು ನೆರೆದಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನಾನು ಪೊಲೀಸ್ ಡ್ರಸ್ ಬಿಟ್ಟು ಬರುತ್ತೇನೆ, ನೋಡಿಕೊಳ್ಳುತ್ತೇನೆ ಬಾ ಎಂದು ಅವಾಜ್ ಹಾಕಿರುವ ಮಾತು ವಿಡಿಯೋದಲ್ಲಿದೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆ ಪಿಎಸ್ಐ ಮಣಿಕಂಠರನ್ನು ಬಳ್ಳಾರಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಪಿಎಸ್ಐ ರಘುರನ್ನು ನಿಯೋಜಿಸಲಾಗಿದೆ. ಪಿಎಸ್ಐ ಮಣಿಕಂಠ ವಿರುದ್ಧ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ಹೋಗಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆಯು ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿ ಮತ್ತು ಕೋಳೂರು ಗ್ರಾಮದ ವ್ಯಕ್ತಿ ಮಧ್ಯೆಯ ಗಲಾಟೆಯಾದರೂ, ಘಟನೆಯ ಹಿಂದೆ ರಾಜಕೀಯ ಲೆಕ್ಕಾಚಾರ ಮತ್ತು ವೈಷಮ್ಯಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಇಲ್ಲಿನ ಜನರು.
ಓದಿ: ದೆಹಲಿ ಸ್ವಾತಂತ್ರೋತ್ಸವದ ಪೆರೇಡ್‌ಗೆ ವಿಜಯನಗರ ವಿದ್ಯಾರ್ಥಿನಿ ಆಯ್ಕೆ