ಬಳ್ಳಾರಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಬೇಸತ್ತು ಹೋಗಿದ್ದು, ಬೀದಿ ನಾಯಿಗಳು ಕಚ್ಚಿರುವ ಪ್ರಕರಣಗಳು ನಿತ್ಯವೂ ವರದಿ ಆಗುತ್ತುವೆ. ಬಳ್ಳಾರಿ ನಗರದಲ್ಲಿ ಗುರುವಾರ ಬೆಳಗ್ಗೆ ನಗರದ ವಿವಿಧೆಡೆ ಬೀದಿನಾಯಿ ದಾಳಿಗೆ ಒಂಬತ್ತು ಜನ ತುತ್ತಾಗಿದ್ದು, ಜಿಲ್ಲಾಸ್ಪತ್ರೆಗೆ ಬಂದು ಬೀದಿ ನಾಯಿ ಕಚ್ಚಿಸಿಕೊಂಡ ರೋಗಿಗಳು ಚಿಕಿತ್ಸೆ ಪಡೆದು ಮನೆಗೆ ವಾಪಸ್ ತೆರಳಿದ್ದಾರೆ. ಬಸವನಕುಂಟೆ ನಿವಾಸಿ ಜಯರಾಮ್ (53), ಹೊರಬಸಪ್ಪ ಗುಡಿಯ ಕಾರ್ತಿಕ್ (46), ಮುಂಡ್ರಗಿಯ ಜಯರಾಮ್ (4), ಶಂಕರ ಬಂಡೆಯ ಪ್ರಜ್ವಲ್ ಕುಮಾರ್ (6), ವಣೆನೂರು ನಿವಾಸಿ ಮಲ್ಲಿಕಾರ್ಜುನ ಗೌಡ (50), ಬಾಪೂಜಿನಗರದ ಗಣೇಶ್ (10), ಗುಗ್ಗರಟ್ಟಿಯ ಶಂಕರ್ (28), ಕಾಕಲತೋಟದ ಲಾವಣ್ಯಾ (12) ಬೀದಿನಾಯಿ ದಾಳಿಗೆ ತುತ್ತಾದವರು.
ಹಿಂದಿನ ವಾರದಲ್ಲಿ ಪಟೇಲ್‌ನಗರದ ಸೂರ್ಯಕುಮಾರ್ (11) ಹಾಗೂ ಹನುಮಾನ್ ನಗರದ ಮಹಮದ್ ಫರ್ಹಾನ್ (6) ಅವರಿಗೆ ಬೀದಿ ನಾಯಿ ಕಚ್ಚಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಫೆ.6ರಂದು ಬಳ್ಳಾರಿ ನಗರದ ವಟ್ಟಪ್ಪಗೇರಿಯಲ್ಲಿ 21 ಜನರಿಗೆ ಹುಚ್ಚು ನಾಯಿ ಕಚ್ಚಿತ್ತು. ಅದರಲ್ಲಿ ಏಳು ಜನ ಮಹಿಳೆ, ಆರು ಮಕ್ಕಳು ಸೇರಿದಂತೆ ಒಟ್ಟು 21 ಜನರ ಕೈ, ಕಾಲಿಗೆ ಕಚ್ಚಿದ್ದು, ಅದರಲ್ಲಿ 18 ಜನರನ್ನು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಬೀದಿನಾಯಿಗೆ ಬಾಲಕಿ ಬಲಿ: ಫೆ. 6ರಂದು ಬೀದಿ ನಾಯಿಗಳ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಳು. ನಗರದ 31ನೇ ವಾರ್ಡ್ನ ವಟ್ಟಪ್ಪಗೇರೆ ನಿವಾಸಿ ಕಿಜರ್ ಅವರ ಪುತ್ರಿ ತಯ್ಯಬಾ(3)ಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ 18 ದಿನಗಳ ಕಾಲ ಸಾವು - ಬದುಕಿನ ಹೋರಾಟ ನಡೆಸಿ ಸಾವನ್ನಪ್ಪಿದ್ದಳು. ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದ್ದರು.
ಶ್ವಾನಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲು ಸರ್ಕಾರ ಕೋಟಿ ಕೋಟಿ ಹಣ ವ್ಯಯಿಸುತ್ತಿದೆ. ಆದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಪ್ರಸ್ತುತ ನಗರದಲ್ಲಿ ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎನ್ನುತ್ತಿದೆ ಜನರು ಒತ್ತಾಯಿಸಿದರೂ, ಬಳ್ಳಾರಿ ಪಾಲಿಕೆ ಮಾತ್ರ ಕ್ಯಾರೇ ಎನ್ನುತ್ತಿಲ್ಲ...!
ಬೀದಿನಾಯಿಗಳ ಉಪಟಳದಿಂದ ಜನರು ಮಕ್ಕಳನ್ನು ಮನೆಬಿಟ್ಟು ಹೊರಗೆ ಆಟಕ್ಕೆ ಕಳುಹಿಸಲು ಸಹ ಹಿಂಜರಿಯುತ್ತಿದ್ದಾರೆ. ಬೀದಿ ನಾಯಿಗಳು ಕಚ್ಚಿ ಹಲವರು ಗಾಯಗೊಳಿಸಿರುವ ಪ್ರಕರಣಗಳು ಬಳ್ಳಾರಿ ಮಹಾನಗರ ಪಾಲಿಕೆ ಗಮನಕ್ಕೆ ತಂದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ ಅನಿಸುತ್ತಿದೆ. ಬೀದಿನಾಯಿ ದಾಳಿ ತಡೆಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜನರು ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಬೀದಿನಾಯಿಗಳು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಎಲ್ಲೂ ಹೋಗಂಗಿಲ್ಲ, ಬರೊಂಗಿಲ್ಲ. ನಗರದ ರಸ್ತೆಯಲ್ಲಿ ಗಾಡಿಯನ್ನು ಸ್ವಲ್ಪ ಸ್ಟೋ ಮಾಡಿದ್ರೆ ಬೀದಿನಾಯಿಗಳು ಬೆನ್ನು ಹತ್ತುತ್ತಿವೆ ಎನ್ನುತ್ತಾರೆ ನಗರ ನಿವಾಸಿ ವಿರೇಶ್..
ಇದನ್ನೂಓದಿ:ಬೈಕ್ ಅಪಘಾತದಲ್ಲಿ ಎನ್ಎಸ್ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವು