ಬಳ್ಳಾರಿ: ಮಹಾನಗರ ಪಾಲಿಕೆಯಲ್ಲಿ ಅಕ್ರಮ, ಅವ್ಯವಹಾರಗಳಿಗೆ ಕಡಿವಾಣ ಹಾಕಿ ಸಿಬ್ಬಂದಿಗಳಿಗೆ ಸಿಂಹಸ್ವಪ್ನರಾಗಿದ್ದ ಪಾಲಿಕೆ ಆಯುಕ್ತರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪಾಲಿಕೆಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಫಾರಸಿನ ಮೇರೆಗೆ ಆಯುಕ್ತರ ವರ್ಗಾವಣೆಗೆ ಕಾರಣವಾಗಿದೆಯಾ ಎಂಬ ಪ್ರಶ್ನೆಯೊಂದು ಉದ್ಭವಿಸಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ. ಪ್ರೀತಿ ಗೇಹ್ಲೋಟ್ ಅವರು ಕಳೆದ ಒಂದೂವರೆ ವರ್ಷದಿಂದ ಬಳ್ಳಾರಿಯ ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇವರ ಜಾಗಕ್ಕೆ ಧಾರವಾಡದ ನಗರಾಭಿವೃದ್ಧಿ ಕೋಶದ ನಿರ್ದೇಶಕರಾಗಿದ್ದ ರುದ್ರೇಶ್ ಎಸ್.ಎನ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಪ್ರೀತಿ ಗೆಹ್ಲೋಟ್ ಅವರು ಐಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಪಾಲಿಕೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ಗಾವಣೆ ಮಾಡುವಂತೆ ಕೋರಿ ಶಿಫಾರಸು ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳಿಸಿದ್ದರು.
ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹಲವು ವರ್ಷಗಳಿಂದ ಬಳ್ಳಾರಿ ಮಹಾನಗರ ಪಾಲಿಕೆಯ ಒಂದೇ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಕಾರಣಕ್ಕೆ ಹಲವು ಜನ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರಕ್ಕೆ ಶಿಫಾರಸು ಮಾಡಿ ಪತ್ರ ಬರೆದಿದ್ದರು.
ಒಂದೇ ಕಡೆ ಆರು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡುವ ಸಿಬ್ಬಂದಿ ಮತ್ತು ಅಧಿಕಾರಿಗಳು ಜಡಗೊಳ್ಳುತ್ತಾರಲ್ಲದೇ, ಕಾರ್ಯವಿಳಂಬ ಧೋರಣೆ ತಾಳಬಹುದು ಮತ್ತು ಹೆಚ್ಚಿನ ಕಾಲ ಒಬ್ಬರೇ ಅಧಿಕಾರಿ ಕೆಲಸ ಮಾಡಿದರೆ ಭ್ರಷ್ಟಾಚಾರಕ್ಕೂ ಅವಕಾಶ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ಆದರೆ ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ವರ್ಗಾವಣೆ ಆಗುವ ಮೊದಲೇ ಖುದ್ದು ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ವರ್ಗಾವಣೆ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.
ಆಯುಕ್ತೆ ವಿರುದ್ದ ಮೇಯರ್, ಉಪಮೇಯರ್ ಸಹಿತ ಪಾಲಿಕೆಯ ಸದಸ್ಯರ ಪ್ರತಿಭಟನೆ : ಇನ್ನು ಕಳೆದ ತಿಂಗಳು ಅಂದರೆ ಜೂನ್ 23ರಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸುತ್ತಿದ್ದಾರೆಂದು ಆರೋಪಿಸಿ ಪಾಲಿಕೆಯ ಮೇಯರ್, ಉಪಮೇಯರ್ ಸಹಿತ ಪಾಲಿಕೆಯ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದ್ದರು.
ಮೇಯರ್ ರಾಜೇಶ್ವರಿ ಸುಬ್ಬರಾಯ್ಡು, ಉಪಮೇಯರ್ ಮಾಲನಬಿ ಅವರ ನೇತೃತ್ವದಲ್ಲಿ ಪಾಲಿಕೆಯ ಕೈ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ಲಾಸ್ಟಿಕ್ ನಿಷೇಧ ಕುರಿತು ಹೋಟೆಲ್ ಮಾಲೀಕರ ಸಭೆ ಕರೆದಿದ್ದರು. ಸಭೆಗೆ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನೂ ಕರೆಯಲಾಗಿತ್ತು.
ಸಭೆಯ ಸಮಯಕ್ಕೆ ಬಂದ ಮೇಯರ್ ಅವರು ಆಯುಕ್ತರಿಗಾಗಿ ಕಾದಿದ್ದರು. ಆದರೆ, ಆಯುಕ್ತೆ ಪ್ರೀತಿ ಗೆಹ್ಲೋಟ್ ಬರಲಿಲ್ಲವಾದ್ದರಿಂದ ಮೇಯರ್ ಅವರು ಸಭೆಯಿಂದ ಹೊರ ಬಂದಿದ್ದರು. ಬಳಿಕ ಸಭೆಗೆ ಬಂದ ಆಯುಕ್ತೆ ಮೇಯರ್, ಉಪಮೇಯರ್ ಹಾಗೂ ಸದಸ್ಯರನ್ನು ಕರೆಯದೇ ಸಭೆ ನಡೆಸಿದ್ದರು. ಈ ವಿಚಾರದಿಂದ ಕುಪಿತಗೊಂಡ ಮೇಯರ್, ಉಪಮೇಯರ್ ಹಾಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು.
ವರ್ಗಾವಣೆಗೆ ಸಾರ್ವಜನಿಕರ ಆಕ್ರೋಶ: ಇವರು ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಸರ್ವಾಧಿಕಾರಿ ಧೋರಣೆಯಿಂದ ಕರ್ತವ್ಯ ನಿಭಾಯಿಸುತ್ತಿದ್ದಾರೆಂದು ಆರೋಪಿಸಿದ್ದರು. ಇನ್ನೂ ಆಯುಕ್ತೆ ಪ್ರೀತಿ ಗೆಹ್ಲೋಟ್ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದರು. ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಹಲವು ಸಂಘ ಸಂಸ್ಥೆಗಳ ನೆರವು ಪಡೆದು ಬಳ್ಳಾರಿಯನ್ನು ಭಾರತದ ಉತ್ತಮ, ಸ್ವಚ್ಛ ನಗರಗಳ ಪಟ್ಟಿಯಲ್ಲಿ ತರುವ ಕನಸು ಹೊಂದಿದ್ದರು. ಇಂತಹ ಅಧಿಕಾರಿ ವರ್ಗಾವಣೆ ಆಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಐಎಎಸ್ ಅಧಿಕಾರಿಯಾಗಿದ್ದ ಪ್ರೀತಿ ಗೆಹ್ಲೋಟ್ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ನಂತರ ಪಾಲಿಕೆಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಆದರೆ ಈಗ ದಿಢೀರ್ ವರ್ಗಾವಣೆ ಆಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಓದಿ : ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ; ಕಾಂಗ್ರೆಸ್ಗೆ ಬರೋದು ಜಸ್ಟ್ 50-60 ಸ್ಥಾನ: ರೇಣುಕಾಚಾರ್ಯ