ಬಳ್ಳಾರಿ: ಇತಿಹಾಸ ಪ್ರಸಿದ್ಧ ಹಂಪಿಯ ವಿಜಯ ವಿಠ್ಠಲ ದೇಗುಲದ ಹಿಂಭಾಗದ ಸಾಲುಗಂಬ ಸ್ಮಾರಕದ ಬಳಿ ಸೆಲ್ಫಿ ಗೀಳಿಗೆ ಬಿದ್ದ ವ್ಯಕ್ತಿಯೊಬ್ಬ ಆ ಸ್ಮಾರಕವನ್ನೇ ಕೆಡವಿದ ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ನಿವಾಸಿ ನಾಗರಾಜ (45) ಬಂಧಿತ ವ್ಯಕ್ತಿ.
ಐತಿಹಾಸಿಕ ಪ್ರಸಿದ್ಧವಾದ ಹಂಪಿ ವೀಕ್ಷಣೆಗೆಂದು ಈತ ಬಂದಿದ್ದ ವೇಳೆ ಇಲ್ಲಿನ ಹಂಪಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬುಧವಾರ ಸಂಜೆ ವಿಜಯ ವಿಠ್ಠಲ ದೇಗುಲ ಹಿಂಭಾಗದ ಸಾಲುಗಂಬ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಆ ಸ್ಮಾರಕವನ್ನು ಕೆಡವಿ ನಾಶಪಡಿಸಿದ ಘಟನೆ ನಡೆದಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಈ ಕುರಿತು ಹಂಪಿ ಠಾಣೆಗೆ ದೂರು ಕೊಟ್ಟಿದ್ದರು.
ಹಂಪಿಯ ಸ್ಮಾರಕಗಳ ಮಹತ್ವ ಅರಿವಿಲ್ಲದೇ ನಾಗರಾಜ ಈ ಕೃತ್ಯ ಎಸಗಿದ್ದಾನೆ ಎಂದು ಹಂಪಿ ಡಿವೈಎಸ್ಪಿ ಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.