ಬಳ್ಳಾರಿ : ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂದೇ ಕಡೆ 5 ಪಾಸಿಟಿವ್ ಪ್ರಕರಣ ಕಂಡು ಬಂದರೆ ಕಂಟೈನ್ಮೆಂಟ್ ಝೋನ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ದನ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಳೆದ ಹದಿನೈದು ದಿನಗಳಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಬಳ್ಳಾರಿ ವಿಮ್ಸ್ನ ಎಂಬಿಬಿಎಸ್ ಮತ್ತು ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಹೀಗಾಗಿ, ಆರೋಗ್ಯ ಇಲಾಖೆಯಿಂದ ಈ ಎರಡೂ ಸ್ಥಳಗಳನ್ನು ಕಂಟೈನ್ಮೆಂಟ್ ಝೋನ್ಗಳನ್ನಾಗಿ ಮಾಡಲಾಗಿದೆ. ಒಂದು ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು 15 ಮಂದಿಯನ್ನ ತಪಾಸಣೆಗೆ ಒಳಪಡಿಸು ವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕೋವಿಡ್ ಪಾಸಿಟಿವ್ ಕಂಡು ಬಂದ ಪ್ರದೇಶಗಳಲ್ಲಿ ನಿರಂತರವಾಗಿ ತಪಾಸಣೆ ಮಾಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ಟ್ರಾವೆಲ್ ಹಿಸ್ಟರಿಯಲ್ಲಿ ಗಾಂಭೀರ್ಯತೆ ಕಂಡುಬಂದಿಲ್ಲ: ವಿಮ್ಸ್ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅವರ ಟ್ರಾವೆಲ್ ಹಿಸ್ಟರಿಯ ಜಾಡು ಹಿಡಿದು ಹೋಗಲಾಗಿತ್ತು. ಆದರೆ, ಅದರಲ್ಲಿ ಅಷ್ಟೊಂದು ಗಾಂಭೀರ್ಯತೆ ಕಂಡು ಬಂದಿಲ್ಲ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸುತ್ತಾಡಿರುವ ಹಾಗೂ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಿಗೆ ಸುತ್ತಾಡಿರುವ ಹಿಸ್ಟರಿ ಕಂಡುಬಂದಿದೆ. ಹೀಗಾಗಿ, ಅವರಿಗೆ ಹೇಗೆ ಕೊರೊನಾ ತಗುಲಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದು ಡಿಹೆಚ್‌ಒ ಹೇಳಿದ್ದಾರೆ.