ಬಳ್ಳಾರಿ: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಕೇಂದ್ರ ಸೇವೆಗೆ ಕರೆಸಿಕೊಳ್ಳಲಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರ ಆಪ್ತ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿದೆ.
ಈ ಕುರಿತು ಕೇಂದ್ರದ ಮಾನವ ಸಂಪನ್ಮೂಲ ಮತ್ತು ತರಬೇತಿ ಇಲಾಖೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಕ್ಷಣ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರನ್ನು ಕಳುಹಿಸಿಕೊಡುವಂತೆ ಸೂಚಿಸಿದೆ.
ಮಡಿಕೇರಿ ಮೂಲದವರಾದ ನಕುಲ್ ಜೂನ್ 19, 2019 ರಂದು ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಮೊದಲು ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಪತ್ನಿಯ ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದರು.
ಇದೀಗ ಒಂದು ವರ್ಷ 6 ತಿಂಗಳ ಕಾಲ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ನಕುಲ್ ಕೇಂದ್ರ ಸರ್ಕಾರದ ಸೇವೆಗೆ ತೆರಳುತ್ತಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಕೊರೊನಾ ನಿಯಂತ್ರಣ ಸೇರಿದಂತೆ ವಿವಿಧ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಅವರಿಗಿದೆ.