ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಮುಕ್ತಾಯಗೊಂಡು ಎರಡು ತಿಂಗಳಾದರೂ ಕೂಡಾ ಮೇಯರ್, ಉಪಮೇಯರ್ ಆಯ್ಕೆಗೆ ಮಾತ್ರ ಇನ್ನೂ ಮುಹೂರ್ತ ನಿಗದಿಯಾಗಿಲ್ಲ. ಇದರಿಂದ ಬಳ್ಳಾರಿ ಮಹಾನಗರದ ನಾನಾ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಲಿವೆ ಎಂಬ ಆರೋಪಗಳು ಕೇಳಿಬಂದಿವೆ.
ಏಪ್ರಿಲ್ 30ರಂದು ಮಹಾನಗರ ಪಾಲಿಕೆ ಚುನಾವಣೆ ಮುಕ್ತಾಯವಾಗಿ 60 ದಿನಗಳು ಕಳೆದು ಹೋಗಿವೆ. ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಕೋವಿಡ್ ಕಾರಣವೊಡ್ಡಿ ಮುಂದಿನ ಆರು ತಿಂಗಳ ಅವಧಿಗೆ ರಾಜ್ಯ ಸರ್ಕಾರ ಮುಂದೂಡಿದೆ. ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆ ನಡೆದಾಗ ಇಲ್ಲದ ಕೋವಿಡ್ ಕಾರಣ ಈಗ್ಯಾಕೆ? ಅಂತ ಹಾಲಿ ಮಹಾನಗರ ಪಾಲಿಕೆ ಸದಸ್ಯರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇದಲ್ಲದೇ, ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಮುಂದೂಡಿರುವ ಹಿಂದೆಯೇ ರಾಜ್ಯ ಸರ್ಕಾರದ ಹುನ್ನಾರ ಅಡಗಿದೆ ಎಂದು ಪಾಲಿಕೆ ಸದಸ್ಯರು ದೂರಿದ್ದಾರೆ. ಕಳೆದ ಬಾರಿ (2013) ಕೂಡ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿತ್ತು. ಆ ಸಂದರ್ಭದಲ್ಲೂ ಮೇಯರ್, ಉಪ ಮೇಯರ್ ಆಯ್ಕೆಯ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸಲಾಗಿತ್ತು. ಆಗಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಇದೀಗ ಕೋವಿಡ್ ನೆಪವೊಡ್ಡಿ ಆಯ್ಕೆಯ ಪ್ರಕ್ರಿಯೆ ಮುಂದೂಡಿದೆ ಎಂದು ಕಾಂಗ್ರೆಸ್ ನ ಹಾಲಿ ಸದಸ್ಯರು ಆರೋಪಿಸಿದ್ದಾರೆ.
ನಾವು ಚುನಾಯಿತರಾಗಿ ಎರಡು ತಿಂಗಳಾಗಿವೆ. ಮೇಯರ್, ಉಪ ಮೇಯರ್ ಆಯ್ಕೆಯ ಪ್ರಕ್ರಿಯೆ ನಡೆಯದ ಕಾರಣ, ನಮ್ಮ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಇದು ಬಿಜೆಪಿಗರಿಗೆ ಬೇಕಾಗಿದೆ. ಯಾಕಂದ್ರೆ, ಕಾಂಗ್ರೆಸ್‌ನ ಹಾಲಿ ಸದಸ್ಯರು ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದ್ರೆ, ಅಧಿಕಾರ ವರ್ಗವಾಗಲಿ ಅಥವಾ ಪಾಲಿಕೆ ಸದಸ್ಯರಾಗಲಿ ನಮ್ಮ ಹಿಡಿತಕ್ಕೆ ಸಿಗೋದಿಲ್ಲ. ಸ್ಥಳೀಯ ಬಿಜೆಪಿ ಶಾಸಕರನ್ನೂ ಕಡೆಗಣಿಸುವ ಸಾಧ್ಯತೆ ಇರುತ್ತೆ. ಹೀಗಾಗಿ, ಮುಂದಿನ ಆರು ತಿಂಗಳ ಅವಧಿಗೆ ಮುಂದೂಡಿದ್ರೆ ನಮಗೆ ಒಳಿತಾಗಲಿದೆಂಬ ಜಿಜ್ಞಾಸೆಯನ್ನ ಬಿಜೆಪಿಗರು ಹೊಂದಿದ್ದಾರೆ ಎಂದು ಹಾಲಿ ಮಹಾನಗರ ಪಾಲಿಕೆ ಸದಸ್ಯ ಪಿ.ಗಾದೆಪ್ಪ ದೂರಿದರು.
ಈ ಬಾರಿ ಕೂಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದೆ. ಮೇಯರ್- ಉಪಮೇಯರ್ ಆಯ್ಕೆಯ ಪ್ರಕ್ರಿಯೆ ನಡೆದರೆ ನಾನೂ ಒಬ್ಬ ಮೇಯರ್ ಆಕಾಂಕ್ಷಿಯಾಗಿರುವೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ ಮೂವತ್ತು ವರ್ಷಗಳಿಂದಲೂ ಪಕ್ಷದಲ್ಲಿದ್ದೇನೆ. ಸಾಮಾನ್ಯ ವರ್ಗಕ್ಕೆ ಮೀಸಲಿರುವ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವೆ ಎಂದರು.
ಇದನ್ನೂ ಓದಿ : ಏಳು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ