ಬಳ್ಳಾರಿ/ಬೆಳಗಾವಿ: ಕೊರೊನಾ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತವಾದ ಚಿಕಿತ್ಸೆ ಸಿಕ್ಕರೆ ಮಾತ್ರ ಸಾವು ಗೆದ್ದು ಬರಲು ಸಾಧ್ಯ. ಆದ್ರೀಗ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಕೊರತೆ ಕ್ಷಣಕ್ಷಣಕ್ಕೂ ಆತಂಕ ಉಂಟುಮಾಡುತ್ತಿದೆ. ಸೋಂಕು ಪ್ರಕರಣಗಳು ಹೆಚ್ಚೆಚ್ಚು ಪತ್ತೆಯಾಗುತ್ತಿರೋದೇ ಇದಕ್ಕೆ ಮೂಲ ಕಾರಣ. ಆದ್ರೆ ರಾಜ್ಯದ ಕೆಲವು ಜಿಲ್ಲೆಗಳು ಕೋವಿಡ್ ವಿರುದ್ಧದ ಸಮರ ಎದುರಿಸಲು ಸನ್ನದ್ಧವಾಗಿವೆ ಅನ್ನೋದು ಸ್ವಲ್ಪ ಸಮಾಧಾನಕರ ಸಂಗತಿ.
ಬಳ್ಳಾರಿಯಲ್ಲಿ ಸೋಂಕಿತರ ಚಿಕಿತ್ಸೆಗೆ 2,000ಕ್ಕೂ ಹೆಚ್ಚು ಬೆಡ್ಗಳು ಲಭ್ಯವಿದೆ. ಆದ್ರೆ ಇಲ್ಲಿ ವೆಂಟಿಲೇಟರ್ ಕೊರತೆ ನಿವಾರಣೆಯಾಗಬೇಕಿದೆ. ಸೋಂಕಿತರಿಗೆ ಸಮಸ್ಯೆಯಾಗದಂತೆ ಸಮರ್ಪಕ ಬೆಡ್ ವ್ಯವಸ್ಥೆ ಮಾಡಲಾಗಿದೆ ಅಂತಾರೆ ಇಲ್ಲಿನ ಡಿಹೆಚ್ಒ ಜನಾರ್ಧನ್.
ಬೆಳಗಾವಿಯ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ 1,995 ಆಕ್ಸಿಜನ್ ಬೆಡ್ ವ್ಯವಸ್ಥೆ ಇದೆ. ಉಳಿದಂತೆ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಸೂಕ್ತ ಪ್ರಮಾಣದಲ್ಲಿ ಸಾಮಾನ್ಯ ಬೆಡ್ ವ್ಯವಸ್ಥೆ ಇದೆ. ಆದ್ರೆ ಸೋಂಕಿತರು ಹೆಚ್ಚಾಗುತ್ತಿದ್ದು ಆಕ್ಸಿಜನ್ ಬೆಡ್ಗಳೆಲ್ಲವೂ ಭರ್ತಿಯಾಗಿವೆ. ಹಾಗಾಗಿ ಇನ್ನೂ 200 ಆಕ್ಸಿಜನ್ ಬೆಡ್ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ.
ಪ್ರತಿದಿನ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಆಕ್ಸಿಜನ್ ಬೆಡ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಕ್ಸಿಜನ್ ಬೆಡ್ ಕೊರತೆಯಿಂದ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಹಾಗಾಗಿ ಸೋಂಕು ಹರಡದಂತೆ ಕ್ರಮ ವಹಿಸೋದೇ ಸದ್ಯದ ಸೂಕ್ತ ಮಾರ್ಗೋಪಾಯ.