ಹೊಸಪೇಟೆ: ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಅವರಿಗೆ ಅನುಕೂಲವಾಗಲೆಂದು ಸೆ.1ರಿಂದ ಬ್ಯಾಟರಿ ಚಾಲಿತ ವಾಹನಗಳನ್ನು ಪುನರಾರಂಭ ಮಾಡಲಾಗುತ್ತಿದೆ ಎಂದು ಆಯುಕ್ತ ಪಿ.ಎನ್.ಲೋಕೇಶ್ ಹೇಳಿದರು.
ತಾಲೂಕಿನ ಸಮೀಪದ ಕಮಲಾಪುರದ ಹಂಪಿ ವಿಶ್ವಪರಂಪರೆ ಅಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ಕಚೇರಿಯಲ್ಲಿ ಇಂದು ಹವಾಮಾದ ಆಯುಕ್ತ ಪಿ.ಎನ್.ಲೋಕೇಶ ನೇತೃತ್ವದಲ್ಲಿ ಪ್ರವಾಸಿ ಮಾರ್ಗದರ್ಶಿಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಅವರು, ಸೆ.01ರಿಂದ ಗೆಜ್ಜಲ ಮಂಟಪದಿಂದ ಬ್ಯಾಟರಿ ಚಾಲಿತ ವಾಹನ ಪುನರಾರಂಭ ಮಾಡಲಾಗುತ್ತಿದೆ. ಪ್ರವಾಸಿ ಮಾರ್ಗದರ್ಶಿಗಳು ಸಮವಸ್ತ್ರ, ಗುರುತಿನ ಚೀಟಿ, ದರಪಟ್ಟಿ, ಸೈಕಲ್ ಪ್ರವಾಸೋದ್ಯಮ ಉತ್ತೇಜಿಸುವ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ಎಎಸ್‌ಐ ರವರ ಆನ್ ಲೈನ್ ಟಿಕೆಟ್ ಪಡೆಯುವಲ್ಲಿ ಇರುವ ನ್ಯೂನ್ಯತೆಗಳನ್ನು ಪ್ರಸ್ತಾಪಿಸಿದ ಗೈಡ್ ಗಳು, ಮೊದಲಿದ್ದಂತೆ ಆಯಾ ಸ್ಮಾರಕದ ಬಳಿ ಟಿಕೆಟ್ ಒದಗಿಸಲು ಕೋರಿದರು. ಕೋವಿಡ್ ಹಿನ್ನೆಲೆಯಲ್ಲಿ ಕಡ್ಡಾಯ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಮಾರಕಗಳ ಬಳಿ ಶುಚಿತ್ವ ಕಾಪಾಡುವುದು ಸೇರಿದಂತೆ ಉನ್ನತ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಹವಾಮಾ ಅಧಿಕಾರಿಗಳು ಮತ್ತು ಸಿಬ್ಬಂದಿ, ಪ್ರವಾಸಿ ಮಾರ್ಗದರ್ಶಿಗಳಿದ್ದರು.