ಬಳ್ಳಾರಿ: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಆಸ್ಪತ್ರೆಗೆ ನಿತ್ಯ ಬರುವ ಸಾವಿರಾರು ರೋಗಿಗಳಿಗೆ ಅನುಕೂಲವಾಗಲೆಂದು ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ವಿಮ್ಸ್ ಆಡಳಿತ ಮಂಡಳಿ ಕೋರಿಕೆಯಂತೆ ಸರ್ಕಾರ ನಾಲ್ಕು ಬ್ಯಾಟರಿ ಚಾಲಿತ ವಾಹನಗಳನ್ನು ಬಳ್ಳಾರಿಗೆ ನೀಡಿದ್ದು, ವಿಮ್ಸ್ ಆಸ್ಪತ್ರೆಗೆ ಎರಡು ಹಾಗೂ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಎರಡು ವಾಹನಗಳನ್ನು ಸೇವೆಗೆ ಬಿಡಲಾಗಿದೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪೈಕಿ ಬಳ್ಳಾರಿಯಲ್ಲಿ ಮಾತ್ರ ಬ್ಯಾಟರಿ ಚಾಲಿತ ವಾಹನ ಸೇವೆಗೆ ವೈದ್ಯಕೀಯ ಇಲಾಖೆ ಕ್ರಮ ವಹಿಸಿದೆ. ಡೆಂಟಲ್ ಆಸ್ಪತ್ರೆ ಸೇರಿದಂತೆ ವಿಮ್ಸ್ ವಿವಿಧ ವಿಭಾಗಗಳಿಗೆ ತೆರಳುವ ರೋಗಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ವೃದ್ಧರು, ತೀವ್ರ ಅಸ್ವಸ್ಥ ರೋಗಿಗಳನ್ನು ಆಸ್ಪತ್ರೆಯ ನಿರ್ದಿಷ್ಟ ವಿಭಾಗಕ್ಕೆ ದಾಖಲು ಮಾಡುವುದು ಕುಟುಂಬಸ್ಥರಿಗೆ ಕಷ್ಟಸಾಧ್ಯ ಎನಿಸಿತ್ತು. ವಿಮ್ಸ್ ಆಸ್ಪತ್ರೆಯಲ್ಲಿ ಹತ್ತಾರು ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಬಸ್ ನಿಲ್ದಾಣದಿಂದ ವಾರ್ಡ್‌ಗೆ ರೋಗಿಗಳನ್ನು ಎತ್ತಿಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಾಲ್ಕು ವಾಹನ: ಇದನ್ನರಿತ ವಿಮ್ಸ್ ಆಡಳಿತ ಮಂಡಳಿ ಬ್ಯಾಟರಿ ಚಾಲಿತ ವಾಹನಗಳನ್ನು ನೀಡುವಂತೆ ವೈದ್ಯಕೀಯ ಇಲಾಖೆಗೆ ಮನವಿ ಮಾಡಿಕೊಂಡಿತ್ತು. ಈಗ ವಿಮ್ಸ್ ಆಸ್ಪತ್ರೆಗೆಂದು ನಾಲ್ಕು ಬ್ಯಾಟರಿ ಚಾಲಿತ ವಾಹನಗಳನ್ನು ವೈದ್ಯಕೀಯ ಇಲಾಖೆ ನೀಡಿದೆ. ಇದರ ಬಳಕೆಯ ಪ್ರಮಾಣ ನೋಡಿಕೊಂಡು ಮತ್ತಷ್ಟು ವಾಹನಗಳನ್ನು ತರಿಸಿಕೊಳ್ಳಲು ವಿಮ್ಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ರೋಗಿಗಳ ಸಂಬಂಧಿಕರು ಹೀಗಂದ್ರು: ವಿಮ್ಸ್ ಆಸ್ಪತ್ರೆಗೆ ರೋಗಿಗಳ ಸೇವೆಗೆಂದು ನೀಡಿರುವ ಬ್ಯಾಟರಿ ಚಾಲಿತ ವಾಹನಗಳಿಂದ ರೋಗಿಗಳು ಅಷ್ಟೇ ಅಲ್ಲ, ರೋಗಿಯ ಕುಟುಂಬಸ್ಥರು ಸಹ ನಿರಾಳಗೊಂಡಂತಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ವಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಯೋರ್ವ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಗಳನ್ನು ಬಸ್ ನಿಲ್ದಾಣದಿಂದ ಎತ್ತಿಕೊಂಡೇ ಓಡೋಡಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದರು. ಈ ಘಟನೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ತುರ್ತು ಚಿಕಿತ್ಸೆಗೆಂದು ವಿಮ್ಸ್‌ಗೆ ಬರುವವರು, ವೃದ್ಧರು ಹಾಗೂ ಒಂದಷ್ಟು ಹೆಜ್ಜೆ ಇಡಲು ಕಷ್ಟವಾಗುವ ರೋಗಿಗಳಿಗೆ ಬ್ಯಾಟರಿ ಚಾಲಿತ ವಾಹನ ಹೆಚ್ಚು ಅನುಕೂಲವಾಗಲಿದೆ. ಸರ್ಕಾರದ ಈ ನಿರ್ಧಾರ ಅತ್ಯಂತ ಶ್ಲಾಘನೀಯ ಅಂತಿದ್ದಾರೆ ರೋಗಿಗಳ ಸಂಬಂಧಿಗಳು.
ಇದನ್ನೂ ಓದಿ: ಮಳೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಸಿಗಳಿಗೆ ಸೂಚನೆ ನೀಡಿದ್ದೇನೆ: ಸಿಎಂ
ವಿಮ್ಸ್ ಆಸ್ಪತ್ರೆಗೆ ನಾಲ್ಕೈದು ಜಿಲ್ಲೆ ಸೇರಿದಂತೆ ನೆರೆಯ ಆಂಧ್ರದ ಗಡಿ ಜಿಲ್ಲೆಗಳ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಬರುವ ರೋಗಿಗಳು ಆಸ್ಪತ್ರೆಗೆ ತೆರಳಲು ಸ್ಟ್ರೆಚರ್ಗಳ ಸಮಸ್ಯೆ ಕೂಡ ಇತ್ತು. ಸಂಬಂಧಿಗಳೇ ರೋಗಿಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ರೋಗಿಗಳಿಗಾಗಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆ.