ಬಳ್ಳಾರಿ: ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವನ್ನು ಮರು ಪಾವತಿಸಲಾಗದೆ ಗಣಿ ಜಿಲ್ಲೆಯ ಕೆಲ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎನ್ನುವ ಆರೋಪವಿದೆ. ಆದರೆ, ಕರ್ನಾಟಕ ರಾಜ್ಯ ಹಣಕಾಸು ಸಾಲ ವ್ಯವಹಾರಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಚಕ್ರಬಡ್ಡಿ ಸೇರಿದಂತೆ ಇತರೆ ಪರವಾನಗಿ ಪಡೆಯದ ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸಲು ಮುಂದಾಗದೇ ಸಹಕಾರ ಇಲಾಖೆ ಕೈಚೆಲ್ಲಿ ಕುಳಿತಿರುವುದು ಮಾತ್ರ ವಿಪರ್ಯಾಸ.
ಗಣಿಜಿಲ್ಲೆಯಲ್ಲಿ ರೈತಾಪಿ ವರ್ಗವು ತಮ್ಮ ಕೃಷಿ ಚಟುವಟಿಕೆಗಳಿಗೆ ಮಾಡಿದಷ್ಟು ಸಾಲವನ್ನು ಬೇರೆ ಚಟುವಟಿಕೆಗಳಿಗೆ ಮಾಡೋದೇ ಇಲ್ಲ. ಅದನ್ನೇ ಮೂಲ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಲೇವಾ ದೇವಿದಾರರು ಬಡ್ಡಿ ಹಾಗೂ ಚಕ್ರಬಡ್ಡಿ ರೂಪದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಸಾಲವನ್ನು ನೀಡುತ್ತಾರೆ. ಕೆಲವರು ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವನ್ನು ಮರು ಪಾವತಿಸಲಾಗದೆ ಮನೆ, ತಮಗೆ ಸೇರಿದ ಒಂದಿಷ್ಟು ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ನಡೆದರೂ ಕೂಡ ಸಹಕಾರ ಇಲಾಖೆಯ ವ್ಯಾಪ್ತಿಗೆ ಇದ್ಯಾವುದು ಅನ್ವಯಿಸುವುದಿಲ್ಲವಂತೆ. ಹೀಗಾಗಿ, ಈ ವ್ಯಾಪ್ತಿಯಲ್ಲಿ ಕೇವಲ ಒಂದೇ ಒಂದು ಕೇಸ್ ಬಿಟ್ಟರೆ ಬೇರೆ ದೂರು ದಾಖಲಾಗಿಲ್ಲ.
ಕುಡುಗೋಡು ತಾಲೂಕಿನಲ್ಲಿ ಒಂದು ಪ್ರಕರಣ:
ಜಿಲ್ಲೆಯ ಕುಡುಗೋಡು ತಾಲೂಕಿನಲ್ಲಿ ಖಾಸಗಿ ಲೇವಾದೇವಿಗಾರರು ಯಾವುದೇ ಪರವಾನಗಿ ಪಡೆಯದೆ ಇದ್ದು, ರೈತನೋರ್ವನಿಗೆ ಹೆಚ್ಚುವರಿ ಬಡ್ಡಿಗೆ ಸಾಲ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಆ ಕುರಿತು ಕೇಸ್ ದಾಖಲಿಸಿದ್ದು ಬಿಟ್ಟರೆ ಮತ್ಯಾವ ಪ್ರಕರಣ ಕೂಡ ದಾಖಲಾಗಿಲ್ಲ.
ಗೊಂದಲ:
ಕರ್ನಾಟಕ ರಾಜ್ಯ ಹಣಕಾಸು ವ್ಯವಹಾರಗಳ ನಿಯಂತ್ರಣ ಕಾಯ್ದೆಯು ಸಹಕಾರ ಇಲಾಖೆಗೆ ಅಥವಾ ಬಳ್ಳಾರಿ ಉಪವಿಭಾಗಾಧಿಕಾರಿ ವ್ಯಾಪ್ತಿಗೆ ಒಳಪಡಲಿದೆಯಾ ಎಂಬ ಗೊಂದಲದಲ್ಲಿ ಉಭಯ ಅಧಿಕಾರಿಗಳು ಇದ್ದಾರೆ. ಹೀಗಾಗಿ, ಮನಿ ಲೆಂಡರ್ಸ್ ಅನ್ನು ನಿಯಂತ್ರಿಸಲು ಅಗುತ್ತಿಲ್ಲ. ಇದರಿಂದ ರೈತಾಪಿವರ್ಗ ಖಾಸಗಿ ಲೇವಾ ದೇವಿಗಾರರಿಂದ ಅತೀವ ಆರ್ಥಿಕ ಸಂಕಷ್ಟ ಎದುರಿಸುತ್ತಿರೋದು ಮಾತ್ರ ದುರಂತ.
ವಿಜಯನಗರದಲ್ಲಿ ಮೂರು ಖಾಸಗಿ ಲೇವಾದೇವಿಗಾರ ಕಂಪನಿಗಳ ವಿರುದ್ಧ ಕೇಸ್ ದಾಖಲು:
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಲ್ಲಾಪುರ ಗ್ರಾಮದಲ್ಲಿ ಶೇ 21 ರಷ್ಟು ಬಡ್ಡಿಯಲ್ಲಿ ಸಾಲ- ಸೌಲಭ್ಯ ನೀಡಿರುವುದಾಗಿ ಬಂದ ದೂರಿನ ಹಿನ್ನೆಲೆ, ಮೂರು ಖಾಸಗಿ ಲೇವಾದೇವಿಗಾರ ಕಂಪನಿಗಳ ವಿರುದ್ಧ ಕೇಸ್ ದಾಖಲು ಮಾಡಲಾಗಿದೆಂದು ಸಹಕಾರ ಸಂಘಗಳ ಇಲಾಖೆಯ ಉಪನಿಬಂಧಕರಾದ ಡಾ. ಸುನೀತಾ ಸಿದ್ರಾಮಪ್ಪ ತಿಳಿಸಿದ್ದಾರೆ.
ಈ ಸಂಬಂಧ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿರುವ ಡಾ. ಸುನೀತಾ, ಮೂರು ಖಾಸಗಿ ಲೇವಾದೇವಿಗಾರ ಕಂಪನಿಗಳು ನಲ್ಲಾಪುರ ಗ್ರಾಮದಲ್ಲಿ ಬಡ ಮತ್ತು ಕೂಲಿಕಾರ್ಮಿಕ ಕುಟುಂಬಗಳಿಗೆ ಶೇಕಡ 21 ರಷ್ಟು ಬಡ್ಡಿಯನ್ನ ವಿಧಿಸಿ ಸಾಲಸೌಲಭ್ಯವನ್ನು ನೀಡಿತ್ತು. ಅದರಿಂದ ಬಡ-ಕೂಲಿಕಾರ್ಮಿಕರು ಹೆಚ್ಚುವರಿ ಆರ್ಥಿಕ ಹೊರೆಯನ್ನು ಅನುಭವಿಸಿದ್ದರು. ಹೀಗಾಗಿ, ಆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಖಾಸಗಿ ಕಂಪನಿಗಳ ಮಾಲೀಕರ ವಿರುದ್ಧ ದೂರು ದಾಖಲಿಸಿ, ಕಂಪನಿಗಳ ವ್ಯಾಪಾರ ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ ಕ್ರೀಡಾ ಶಾಲೆಯಲ್ಲಿಲ್ಲ ಖಾಯಂ ತರಬೇತುದಾರರು
ಮನಿ ಲೆಂಡಿಂಗ್ ಆ್ಯಕ್ಟ್ ಪ್ರಕಾರ ಶೇ 14 ರಿಂದ 16 ರಷ್ಟು ಬಡ್ಡಿ ರೂಪದಲ್ಲಿ ಸಾಲ-ಸೌಲಭ್ಯವನ್ನು ನೀಡಲು ಅವಕಾಶ ಇದೆ. ಹೆಚ್ಚುವರಿಯಾಗಿ ಬಡ್ಡಿಯನ್ನ ವಿಧಿಸಿ, ಸಾಲ- ಸೌಲಭ್ಯ ನೀಡುವುದು ತರವಲ್ಲ. ಹಾಗೊಂದು ವೇಳೆ ಇಂತಹ ಘಟನೆಗಳು ಬೆಳಕಿಗೆ ಬಂದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಡಾ. ಸುನೀತಾ ಸಿದ್ದರಾಮಪ್ಪ ತಿಳಿಸಿದ್ದಾರೆ.