ಬಳ್ಳಾರಿ: ಸಾವಿರಾರು ಮಹಿಳೆಯರ ಬದುಕಿಗೆ ದಾರಿದೀಪವಾಗಿದ್ದ ಸಂಡೂರು ಸ್ವಯಂ ಶಕ್ತಿ ಯೋಜನೆಗೆ ರಾಷ್ಟ್ರಮಟ್ಟದ skoch award ಲಭಿಸಿದೆ. ಜಿಲ್ಲಾಡಳಿತವು ಜಿಲ್ಲಾ ಖನಿಜ ನಿಧಿ ಬಳಸಿಕೊಂಡು ನಿರುದ್ಯೋಗಿ ಮಹಿಳೆಯರಿಗೆ ಆರ್ಥಿಕವಾಗಿ ಸಬಲರನ್ನಾಗಿಸಲು ಈ ಯೋಜನೆ ರೂಪಿಸಿತ್ತು.
ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಜಿಪಂ ಸಿಇಒ ಕೆ ಆರ್ ನಂದಿನಿ ಅವರ ಮುಂದಾಳತ್ವದಲ್ಲಿ ಸಂಡೂರು ತಾಲೂಕಿನ 26 ಗ್ರಾಮ ಪಂಚಾಯತ್‌ಗಳಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಆರ್ಥಿಕವಾಗಿ ಸಬಲರನ್ನಾಗಿಸಲು ಸಂಡೂರು ಸ್ವಯಂಶಕ್ತಿ ಯೋಜನೆ ಅಡಿ ಹೊಲಿಗೆ ತರಬೇತಿ ಹಾಗೂ ಅದಕ್ಕೆ ಸಂಬಂಧಿಸಿದ ಹೊಲಿಗೆ ಯಂತ್ರ ಹಾಗೂ ಪರಿಕರಗಳನ್ನ ವಿತರಿಸಲಾಯಿತು.
ಸಾವಿರಾರು ಮಹಿಳೆಯರ ಬದುಕಿನ ದಿಕ್ಕನ್ನು ಬದಲಿಸಿದ್ದ ಈ ಯೋಜನೆಯ ಯಶಸ್ಸನ್ನು ಗುರುತಿಸಿರುವ ಖಾಸಗಿ ಪ್ರತಿಷ್ಠಿತ ಸ್ಕಾಚ್ ಗ್ರೂಪ್ ರಾಷ್ಟ್ರ ಮಟ್ಟದ skoch award ಪ್ರಶಸ್ತಿ ನೀಡಿ ಜಿಲ್ಲಾಡಳಿತಕ್ಕೆ ಪ್ರೋತ್ಸಾಹಿಸಿದೆ.
ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದ ಪರಿಕಲ್ಪನೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನೇರ ಫಲಾನುಭವಿಗಳ ಉಪಯೋಗತೆಯನ್ನು ಗುರುತಿಸಿರುವ ಸ್ಕಾಚ್ ಗ್ರೂಪ್ ಸ್ಕಾಚ್ ಸಿಲ್ವರ್ ಅವಾರ್ಡ್ ನೀಡಿ ಗೌರವಿಸಿದೆ. ಈ ಯೋಜನೆಯಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೊಲಿಗೆ ತರಬೇತಿ ನೀಡಿದ ದೇಶದಲ್ಲಿಯೇ ಮೊಟ್ಟಮೊದಲನೇ ಕಾರ್ಯಕ್ರಮವಾಗಿರುವುದರಿಂದ ಈ ಪ್ರಶಸ್ತಿಯು ಬಳ್ಳಾರಿ ಜಿಲ್ಲೆಗೆ ಲಭಿಸಿದೆ.
ಈ ಸುದ್ದಿಯನ್ನೂ ಓದಿ: ದೊಡ್ಡಬಳ್ಳಾಪುರ : ಬಾರ್ ಮತ್ತು ವೈನ್ ಶಾಪ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರ ಬಂಧನ
ಸಂಡೂರು ಸ್ವಯಂ ಶಕ್ತಿ ಯೋಜನೆ ಅನುಸಾರ ಸಂಡೂರು ತಾಲೂಕಿನಲ್ಲಿ 2,080 ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ, ತರಬೇತಿ ಅವಧಿಯಲ್ಲಿ ಪ್ರತಿಯೊಬ್ಬರಿಗೆ 3 ಸಾವಿರ ರೂ. ಶಿಷ್ಯವೇತನ ನೀಡಲಾಗಿದೆ. ನಿರಂತರ ಈ ಕೌಶಲ್ಯವನ್ನು ವೃತ್ತಿಯನ್ನಾಗಿ ಮುಂದುವರಿಸಲು ಹಾಗೂ ಈ ಮೂಲಕ ಅರ್ಥಿಕವಾಗಿ ಸದೃಢರಾಗಲು ಉಚಿತ ಹೊಲಿಗೆ ಯಂತ್ರವನ್ನು ಸಹ ನೀಡಲಾಗಿದೆ.
ತರಬೇತಿ ಪಡೆದ ಫಲಾನುಭವಿಗಳಿಂದ ಸುತ್ತಮುತ್ತಲಿನ ಕಾರ್ಖಾನೆಯ ಕಾರ್ಮಿಕರಿಗೆ ಬೇಕಾಗಿರುವ ಸಮವಸ್ತ್ರಗಳನ್ನು ತಯಾರಿಸಿ ಪೂರೈಸುವುದಕ್ಕೆ ಜಿಲ್ಲಾಡಳಿತವು ಅನುಕೂಲ ಮಾಡಿಕೊಟ್ಟಿದೆ. ಈ ಯೋಜನೆಯಿಂದ ಫಲಾನುಭವಿಗಳು ಸ್ವಂತ ಬಟ್ಟೆಗಳನ್ನು ಹೊಲಿಗೆ ಮಾಡುವುದರ ಮೂಲಕ ಹಾಗೂ ಇತರರಿಗೆ ಮತ್ತು ಕಾರ್ಖಾನೆಗಳಿಗೆ ಬೇಕಾದ ಬಟ್ಟೆಗಳನ್ನು ಹೊಲಿಯುವ ಮೂಲಕ ಆರ್ಥಿಕವಾಗಿ ಸಬಲರಾಗಿದ್ದಾರೆ.