ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎರಡು ರೋಗಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಪಿಜಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಆವರಣದಲ್ಲಿನ ನಿರ್ದೇಶಕರ ಕಚೇರಿ ಎದುರು ನೂರಾರು ಪಿಜಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು, ಪ್ರತಿಭಟನೆಯಲ್ಲಿ ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದೊಂದು ವಾರದಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಎರಡು ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಆ ಇಬ್ಬರ ಬಳಿ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದವರನ್ನು ಹೊರತುಪಡಿಸಿ ಇನ್ನಿತರ ಪಿಜಿ ವಿದ್ಯಾರ್ಥಿಗಳು ಕಾಂಟ್ಯಾಕ್ಟ್ ಹೊಂದಿದ್ದಾರೆ. ಅಲ್ಲದೇ ಚಿಕಿತ್ಸೆಯ ವೇಳೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೂಡ ನಮಗೆ ಪೂರೈಕೆ ಮಾಡುತ್ತಿಲ್ಲ. ಅದರಿಂದ ವಿಮ್ಸ್ ಆಸ್ಪತ್ರೆಯ ರೋಗಿಗಳ ಸೇವೆಗೆ ಮುಂದಾಗಿರುವ ನಮಗೆಲ್ಲ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ನ್ನು ವಿತರಿಸಬೇಕೆಂದು ಆಗ್ರಹಿಸಿದ್ರು.ದರು.
ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ, ವಿಮ್ಸ್ ಆಸ್ಪತ್ರೆಯ ರೋಗಿಗಳ ಜೊತೆಗೆ ಕೆಲಸ ಮಾಡುವುದು ನಮಗೆ ಕಷ್ಟವಾಗಿದೆ. ನಿನ್ನೆ ಪಾಸಿಟಿವ್ ಬಂದಿರುವ ರೋಗಿ ಕಳೆದ ವಾರದಿಂದ ವಿಮ್ಸ್ನಲ್ಲಿ ದಾಖಲಾಗಿದ್ದರು. ಆತನಿಗೆ ಚಿಕಿತ್ಸೆ ನೀಡಿದ ನಮ್ಮನ್ನು ಕ್ವಾರಂಟೈನ್ ಮಾಡಿ ಎಂದು ಪಟ್ಟು ಹಿಡಿದರು.
ಶಾಸಕರ ಸಂಧಾನಕ್ಕೂ ಜಗ್ಗದ ಪಿಜಿ ವಿದ್ಯಾರ್ಥಿಗಳು :
ಇನ್ನು ಈ ಕುರಿತಾಗಿ ಮಾತನಾಡಲು ಬಂದ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಮಾತಿಗೂ ಪಿಜಿ ವಿದ್ಯಾರ್ಥಿಗಳು ಜಗ್ಗಲಿಲ್ಲ. ದೊಡ್ಡ ದೊಡ್ಡ ಡಾಕ್ಟರ್ಗಳು ಚಿಕಿತ್ಸೆ ನೀಡಲು ಬರುವುದಿಲ್ಲ. ಕೇವಲ ಪಿಜಿ ವಿದ್ಯಾರ್ಥಿಗಳು ಮಾತ್ರ ನೋಡಿಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದರು. ಮಾಸ್ಕ್ ಹಾಗೂ ಸ್ಯಾನಿಟೈಸರ್ ಇಲ್ಲ ಹಾಗೂ ಭದ್ರತೆ ಇಲ್ಲ. ಹೀಗಿರುವಾಗ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ಶಾಸಕರನ್ನು ಮರು ಪ್ರಶ್ನಿಸಿದರು.