ಬಳ್ಳಾರಿ: ಇಲ್ಲಿನ ಕೋಟೆ ಪ್ರದೇಶದಲ್ಲಿರುವ ತಾಲೂಕು ಪಂಚಾಯತ್ ಕಚೇರಿಯಲ್ಲಿಂದು 3ನೇ ತ್ರೈಮಾಸಿಕ ಕೆಡಿಪಿ ಸಭೆಗೆ ಅಂದಾಜು 2 ಗಂಟೆ ತಡವಾಗಿ ಬಂದಿದ್ದಕ್ಕೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಕ್ಷಮೆಯಾಚಿಸಿದ್ದಾರೆ.
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 3ನೇ ತ್ರೈಮಾಸಿಕ ಕೆಡಿಪಿ ಸಭೆಯು ಇಂದು ಬೆಳಗ್ಗೆ 10 ಗಂಟೆಗೆ ನಿಗದಿಯಾಗಿತ್ತು. ಆದರೆ, ಮಧ್ಯಾಹ್ನ 12.30ರ ನಂತರ ಸಭೆ ಶುರುವಾಯ್ತು. ಹೀಗಾಗಿ, ಶಾಸಕ ಬಿ.ನಾಗೇಂದ್ರ ಅವರು ಕ್ಷಮೆಯಾಚಿಸಿದರಲ್ಲದೇ ಮದುವೆ ಹಾಗೂ ನಿವೇಶನಗಳ ನೆಲಸಮಗೊಳಿಸಿದ್ದರಿಂದ ಮೂಲ ನಿವಾಸಿಗಳು ವಾಸಿಸುತ್ತಿರುವ ಸ್ಥಿತಿಗತಿ ಆಲಿಸಲು ಹೋಗಿದ್ದೆ ಎಂಬ ಕಾರಣ ಕೊಟ್ಟರು.
ನಂತರ ಸಭೆಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಯಾವುದಾದರೂ ಸಮಸ್ಯೆಗಳಿದ್ದರೆ ನೇರ ನನಗಾಗಲಿ ಅಥವಾ ಅಧಿಕಾರಿ ವರ್ಗಕ್ಕಾಗಲಿ ತಿಳಿಸಬೇಕೆಂದರು.
ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕ್ಯಾರಿ ಫಾರ್ವರ್ಡ್ ಮಾಡಲು ನಾನು ಬಿಡೋದಿಲ್ಲ. ಯಾವುದಾದ್ರೂ ಕಾಮಗಾರಿ ಕ್ಯಾರಿ ಫಾರ್ವರ್ಡ್ ಆದ್ರೆ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದರು.