ಬಳ್ಳಾರಿ: ಜಿಲ್ಲೆಯ ಬಸವೇಶ್ವರ ನಗರ ನಿವಾಸಿ ವಿದ್ಯಾಶ್ರೀ ಬಿ ಕಳೆದ ಮೂರು ವರ್ಷಗಳಿಂದ ಭಾರತೀಯ ಯೋಧರಿಗೆ ರಾಖಿ ಕಳಿಹಿಸುವ ಮೂಲಕ ರಕ್ಷಾಬಂಧನವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಸ್ವಂತ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುವುದು ಸಾಮಾನ್ಯ. ಆದರೆ ರಕ್ತ ಸಂಬಂಧದ ಹಂಗಿಲ್ಲದಿದ್ದರೂ ರಾಷ್ಟ್ರ ರಕ್ಷಣೆಗಾಗಿ ಪ್ರಾಣ ಮುಡಿಪಾಗಿಡುವ ಸೈನಿಕರನ್ನು ಅಣ್ಣತಮ್ಮಂದಿರಂತೆ ಗೌರವಿಸಿ ಇವರು ರಕ್ಷೆ ಕಳುಹಿಸುತ್ತಿದ್ದಾರೆ.
ಬಳ್ಳಾರಿಯಿಂದ ರಾಖಿ ತಲುಪಿದ ನಂತರ ಸೈನಿಕರು ಅದನ್ನು ಧರಿಸಿ ವಿದ್ಯಾಶ್ರೀ ಅವರೊಂದಿಗೆ ಮಾತನಾಡಿ ತಮ್ಮ ಸಂತಸ ಹಂಚಿಕೊಳ್ಳುತ್ತಾರೆ. ಬಂಧುತ್ವವಿಲ್ಲದಿದ್ದರೂ ರಕ್ಷಾ ಬಂಧನದದ ಮೂಲಕ ಸಹೋದರತ್ವದ ಸೆಲೆಯನ್ನು ಪಡೆಯುವ ಈ ಅಪರೂಪದ ಕ್ರಿಯೆಯ ಹಿಂದಿರುವುದು ಭ್ರಾತೃ ಪೇಮ ಹಾಗೂ ರಾಷ್ಟ ಭಕ್ತಿ. ರಕ್ಷ ಬಂಧನ ಹಿನ್ನೆಲೆಯಲ್ಲಿ ಪ್ರತಿವರ್ಷ ವಿದ್ಯಾಶ್ರೀ ಸುಮಾರು 1,000 ಯೋಧರಿಗೆ ರಾಖಿ ಕಳಿಸುತ್ತಿದ್ದಾರೆ.
ಇದರಲ್ಲಿ ವಾಘಾ ಗಡಿಯಲ್ಲಿರುವ ಯೋಧರು, ಅಸ್ಸಾಂನಲ್ಲಿರುವ ಯೋಧರು ಹಾಗೂ ಬಾರ್ಡರ್ ಸೆಕ್ಯೂರಿಟಿ ಪೋರ್ಸ್ನ ಯೋಧರು ಸೇರಿದ್ದಾರೆ. ಯೋಧರ ಕ್ಷೇಮಾಭಿವೃದ್ಧಿಗಾಗಿ ಬೆಂಗಳೂರಿನ ನಿವೃತ್ತ ಯೋಧ ಜಯರಾಂ ಎನ್ನುವವರು 'ಯೋಧ ನಮನ' ಸಂಸ್ಥೆ ನಡೆಸುತ್ತಿದ್ದು, ಅವರ ಮೂಲಕ ವಿದ್ಯಾಶ್ರೀ ರಾಖಿಯನ್ನು ಸೈನಿಕರು ಕಳಿಸುತ್ತಾರೆ.
"ದೇಶದ ಗಡಿಯಲ್ಲಿ ನಮ್ಮ ರಕ್ಷಣೆಗೆ ಪ್ರಾಣದ ಹಂಗು ತೊರೆದು, ಕುಟುಂಬದಿಂದ ದೂರ ಇದ್ದು ಕಾರ್ಯ ನಿರ್ವಹಿಸುವ ಯೋಧರಿಗೆ ಹಬ್ಬ ಹರಿದಿನಗಳೇ ಇಲ್ಲ. ರಕ್ಷಾ ಬಂಧನದ ಈ ಶುಭ ಸಂದರ್ಭದಲ್ಲಿ ನಮ್ಮ ಸೈನಿಕರ ಜೊತೆ ನಿಮ್ಮ ಸಹೋದರಿಯರಾದ ನಾವು ನಿಮ್ಮೊಂದಿಗಿದ್ದೇವೆ ಎಂದು ತಿಳಿಸುವ ನಿಟ್ಟನಲ್ಲಿ ರಾಖಿಯನ್ನು ಪ್ರತಿ ವರ್ಷ ಕಳಿಸುತ್ತೇನೆ. ಸುಮಾರು 200 ಯೋಧ ಸಹೋದರರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ" ಎಂದು ವಿದ್ಯಾಶ್ರೀ ತಿಳಿಸಿದರು.
ಇದನ್ನೂ ಓದಿ : ಅನಾರೋಗ್ಯಪೀಡಿತ ಚಿರತೆ ಮರಿಗೆ ರಾಖಿ ಕಟ್ಟಿ ಮಮತೆ ತೋರಿಸಿದ ಮಹಿಳೆ!