ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕು ಪಂಚಾಯಿತಿ ಹಾಲಿ - ಮಾಜಿ ಅಧ್ಯಕ್ಷರ ನಡುವಿನ ಗಲಾಟೆ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಾಲಿ ಅಧ್ಯಕ್ಷರನ್ನು ಬಂಧಿಸಲಾಗಿದೆ.
ಮಾಜಿ ಅಧ್ಯಕ್ಷ ಬೆಣ್ಣೆ ಕೊಟ್ರೇಶ ಎಂಬುವರ ಮೇಲೆ ಜಿಲ್ಲೆಯ ಕೊಟ್ಟೂರಿನ ಎಸ್ಬಿಐ ಬ್ಯಾಂಕೊಂದರಲ್ಲಿ ಹಲ್ಲೆ ನಡೆದಿತ್ತು. ಜಿಲ್ಲೆಯ ಕೂಡ್ಲಿಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ ನಾಯ್ಕ ಎಂಬವರು ಈ ಹಲ್ಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಇಂದಿನವರೆಗೂ ಹಾಲಿ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ದೂರದ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಾಯ್ಕ:
ಕೂಡ್ಲಿಗಿ ತಾಲೂಕು ಪಂಚಾಯಿತಿ ಹಾಲಿ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು, ರಾಜಧಾನಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಕೂಡ್ಲಿಗಿ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ನಂತರ ಸತತ ಹುಡುಕಾಟ ನಡೆಸಿ ಇಂದು ಆರೋಪಿ ವೆಂಕಟೇಶ ನಾಯ್ಕ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಹಾಲಿ - ಮಾಜಿ ಅಧ್ಯಕ್ಷರ ನಡುವೆ ಜಗಳ ಉಂಟಾಗಿತ್ತು. ಮಾಜಿ ಅಧ್ಯಕ್ಷ ಬೆಣ್ಣೆ ಕೊಟ್ರೇಶ ಅವರ ಮೇಲೆ ಹಲ್ಲೆ ನಡೆಸಿದ್ದ ಹಾಲಿ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು, ಅಂದಾಜು ಲಕ್ಷ ರೂ.ಗಳ ನಗದನ್ನು ಕಸಿದುಕೊಂಡಿದ್ದರು ಎಂದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಸಿ.ಕೆ.ಬಾಬಾ ಪ್ರಕರಣದ ಬಗ್ಗೆ ವಿವರಿಸಿದರು.