ಬಳ್ಳಾರಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಮತ್ತೆ ಸದ್ದಿಲ್ಲದೆ ತಲೆ ಎತ್ತಿದೆ.
ಬಾಲ್ಯ ವಿವಾಹ ತಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸನ್ನದ್ಧವಾಗಿದ್ದು, ಈಗಾಗಲೇ ಹತ್ತಾರು ಬಾಲ್ಯ ವಿವಾಹಗಳನ್ನ ಅಧಿಕಾರಿಗಳು ತಡೆದಿದ್ದಾರೆ. ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಬಾಲ್ಯ ವಿವಾಹಕ್ಕೆ ತಯಾರಿ ನಡೆಸುತ್ತಿರುವುದರ ಕುರಿತು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ಬಂದ ಹಿನ್ನೆಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಬಾಲ್ಯ ವಿವಾಹ ನಿಲ್ಲಿಸಿದ್ದಾರೆ.
ಶ್ರೀಧರಗಡ್ಡೆ ಗ್ರಾಮದ ಯುವಕನೊಂದಿಗೆ ಬಳ್ಳಾರಿಯ ಸಿದ್ದಾರ್ಥ ನಗರದ 14 ವರ್ಷದ ಬಾಲಕಿಯ ವಿವಾಹ ಶುಕ್ರವಾರ ನಿಶ್ಚಯಿಸಲಾಗಿತ್ತು. ಇದಲ್ಲದೇ, ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ 16 ವರ್ಷದ ಬಾಲಕಿಯೊಂದಿಗೆ ಗೆಣಿಕಿಹಾಳ ಗ್ರಾಮದ 23 ವರ್ಷದ ಯುವಕ, ಗೋಸಬಾಳ್ ಗ್ರಾಮದ 16 ವರ್ಷದ ಬಾಲಕಿಯೊಂದಿಗೆ ರಾಯಚೂರು ಜಿಲ್ಲೆಯ 25 ವರ್ಷದ ಯುವಕ, ಬಳ್ಳಾರಿ ತಾಲೂಕಿನ ಗೆಣಿಕಿಹಾಳ್ ಗ್ರಾಮದ 17 ವರ್ಷದ ಬಾಲಕಿಯೊಂದಿಗೆ ಕೋಳೂರು ಗ್ರಾಮದ 23 ವರ್ಷದ ಯುವಕನ ಮದುವೆ ನಿಶ್ಚಯವಾಗಿತ್ತು.
ಸಿಂದಿಗೇರಿ ಗ್ರಾಮದ 16 ವರ್ಷದ ಬಾಲಕಿಗೆ ಅದೇ ಗ್ರಾಮದ 24 ವರ್ಷದ ಯುವಕ, ಶಂಕರ ಬಂಡೆ ಗ್ರಾಮದ 14 ವರ್ಷದ ಬಾಲಕಿಯೊಂದಿಗೆ ಕಾರೇಕಲ್ಲು ಗ್ರಾಮದ 25 ವರ್ಷದ ಯುವಕ, ಬಳ್ಳಾರಿ ತಾಲೂಕಿನ ಮೋಕ ಗ್ರಾಮದ 16 ವರ್ಷದ ಬಾಲಕಿಯೊಂದಿಗೆ ಅದೇ ಗ್ರಾಮದ 23 ವರ್ಷದ ಯುವಕ ಹಾಗೂ ಬೈರದೇವನಹಳ್ಳಿ ಗ್ರಾಮದ 14 ವರ್ಷದ ಬಾಲಕಿಗೆ ಅದೇ ಗ್ರಾಮದ ಯುವಕನೊಂದಿಗೆ ಇತ್ತೀಚೆಗೆ ಮದುವೆ ನಿಶ್ಚಯವಾಗಿತ್ತು.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್ ಪಾಷಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜಾನಾಯ್ಕ್, ಚನ್ನಬಸಪ್ಪ ಪಾಟೀಲ್, ಮಕ್ಕಳ ರಕ್ಷಣಾಧಿಕಾರಿ ಈಶ್ವರ್ ರಾವ್, ಗ್ರಾಮೀಣ ಠಾಣೆಯ ಎಎಸ್ಐ ಶೇಖ್ ಮೊಹಮ್ಮದ್, ಸಿಡಿಪಿಒ ಉಷಾ, ಸಹಾಯಕ ಸಿಡಿಪಿಒ ರಾಜನಾಯ್ಕ, ಸಿಬ್ಬಂದಿ ಎಲ್‌ಪಿಒ ಈಶ್ವರ್ ರಾವ್, ಕಲಾವತಿ, ಉಮೇಶ, ರವಿಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ತೆರಳಿ ಈ ಬಾಲ್ಯ ವಿವಾಹಗಳನ್ನ ತಡೆ ಹಿಡಿದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಆರ್. ನಾಗರಾಜ ತಿಳಿಸಿದ್ದಾರೆ.