ಬಳ್ಳಾರಿ : ಕೊರೊನಾ ವೈರಸ್ ಎಫೆಕ್ಟ್ನಿಂದ ಸಾಮಾಜಿಕ ಅಂತರ ಕಾಯ್ದುಕೊಂಡೇ ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಸಾರ್ವಜನಿಕರ ಅಹವಾಲು ಅರ್ಜಿಗಳನ್ನ ಸ್ವೀಕರಿಸುವ ಮುಖೇನ ನೋಡುಗರ ಗಮನ ಸೆಳೆದ್ರು.
ತಮ್ಮ ಕಚೇರಿಗೆ ಜಿಲ್ಲಾಧಿಕಾರಿ ನಕುಲ್ ಅವರು ಸಮಯಕ್ಕೆ ಸರಿಯಾಗಿ ಆಗಮಿಸುತ್ತಿದ್ದಂತೆಯೇ ಸಾರ್ವಜನಿಕರು ತಮ್ಮ ಅಹವಾಲು ಅರ್ಜಿಗಳನ್ನ ಕೈಯಲ್ಲಿ ಹಿಡಿದುಕೊಂಡೇ ಸಾಲು ಸಾಲಾಗಿ ನಿಂತಿದ್ದರು. ಅವರನ್ನ ಒಬ್ಬೊಬ್ಬರಾಗಿ ಕರೆದು ಡಿಸಿ, ಅವರ ಬಳಿಯಿದ್ದ ಅರ್ಜಿಯನ್ನು ಸಾವಧಾನವಾಗಿ ಆಲಿಸಿ ಇತ್ಯರ್ಥಪಡಿಸಿದ್ರು.
ಕೆಲವರು ರುದ್ರಭೂಮಿ ಶವ ಸಾಗಿಸುವ ವಾಹನಕ್ಕೆ ಪರವಾನಗಿ, ಇನ್ನು ಕೆಲವರು ಪ್ರವಾಸ, ಆಹಾರ ಪೂರೈಕೆ ಸೇರಿ ಇನ್ನಿತರೆ ಬೇಡಿಕೆಗಳನ್ನ ಹೊತ್ತು ತಂದಿದ್ದರು. ಅವರೆಲ್ಲರ ಅಹವಾಲು ಅರ್ಜಿಗಳನ್ನ ಡಿಸಿ ಕಚೇರಿಗೆ ಹೋಗುವ ಮುನ್ನವೇ ಆಲಿಸಿ ಇತ್ಯರ್ಥಪಡಿಸಲು ಪ್ರಯತ್ನಿಸಿದ್ರು. ಬಳಿಕ ಕಚೇರಿಗೆ ತೆರಳಿದ್ರು.
ಸುದ್ದಿಗಾರರೊಂದಿಗೆ ಡಿಸಿ ನಕುಲ್ ಅವರು ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಕಟ್ಟು ನಿಟ್ಟಾಗಿ ಕ್ರಮವಹಿಸಲಾಗಿದೆ. ಬೇಕರಿ ಅಂಗಡಿ ತೆರೆಯೋದಕ್ಕೆ ಅವಕಾಶ ನೀಡಬೇಕೋ ಅಥವಾ ಬೇಡವಾ ಎಂಬ ಗೊಂದಲ ಮೂಡಿದೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವೆ. ಅಲ್ಲಿಂದ ಆದೇಶ ಬಂದ್ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದೆಂದ್ರು.
ಜಮಾತ್ಗೆ ಹೋಗಿ ಬಂದವರೆಲ್ಲರೂ ಕೂಡ ನಮ್ಮ ಕಾಲ್ ಸೆಂಟರ್ಗೆ ಕರೆಮಾಡಿ ಸಲಹೆ-ಸೂಚನೆಗಳನ್ನ ಪಡೆದು ಕೊಂಡಿದ್ದಾರೆ. ಈಗಾಗಲೇ 66 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಉಳಿದವರ ಕೌನ್ಸೆಲಿಂಗ್ ನಡೆಸಲಾಗಿದೆ. ಅವರಲ್ಲಿ ಯಾವುದೇ ರೋಗದ ಗುಣಲಕ್ಷಣಗಳು ಇರೋದಿಲ್ಲ ಎಂಬುದು ತಿಳಿದು ಬಂದಿದೆ ಎಂದರು.