ಬಳ್ಳಾರಿ: ಬಿ.ಶ್ರೀರಾಮುಲು ಅವರು 1996 ರಲ್ಲಿ ಬಳ್ಳಾರಿ ಪುರಸಭೆಯ ಕೌನ್ಸಿಲರ್ ಆಗಿ ರಾಜಕೀಯ ಪಯಣ ಪ್ರಾರಂಭಿಸಿದರು. 1999ರಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಾಮುಲು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2001ರಲ್ಲಿ ಬಳ್ಳಾರಿ ಪುರಸಭೆ ಚುನಾವಣೆಯಲ್ಲಿ ಬಿ.ಶ್ರೀರಾಮುಲು ಅವರ ನಾಯಕತ್ವದಲ್ಲಿ ಬಿಜೆಪಿ ಬಳ್ಳಾರಿ ಪುರಸಭೆಯನ್ನು ವಶಪಡಿಸಿಕೊಂಡಿತ್ತು. ಆದರೆ, 1999ರಲ್ಲಿ ರಾಮುಲು ಸೋಲನುಭವಿಸುವಂತಾಯಿತು.
ನಂತರ ಶ್ರೀರಾಮುಲು ಸೋತ ಮಾತ್ರಕ್ಕೆ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. 1999 ರಿಂದ 2004 ರ ನಡುವೆ ಅವರು ಮತ್ತೆ ಜನರ ಬಳಿಗೆ ಹೋಗುತ್ತಾರೆ. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡುತ್ತಾರೆ. ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಲು ಶ್ರಮಿಸ್ತಾರೆ. ಬಿಜೆಪಿ ಪಕ್ಷದ ಸಂಘಟನೆಗಾಗಿ ಇಡೀ ಬಳ್ಳಾರಿ ಜಿಲ್ಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಾರೆ. ಇದರ ಪರಿಣಾಮವಾಗಿ 2004ರಲ್ಲಿ ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಶ್ರೀರಾಮುಲು ಅವರು ಬಿಜೆಪಿಯಿ೦ದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ, ಆಗಿನ ಕಾಂಗ್ರೆಸ್ ಸಚಿವರಾಗಿದ್ದ ದಿವಾಕರ್‌ಬಾಬು ವಿರುದ್ಧ ಅದ್ಭುತ ಬಹುಮತದೊಂದಿ ಗೆಲ್ಲುತ್ತಾರೆ. ಅದೇ 2004 ರ ಸಂಸತ್ ಚುನಾವಣೆಯಲ್ಲಿ ಕರುಣಾಕರ ರೆಡ್ಡಿ ಬಿಜೆಪಿಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬಳ್ಳಾರಿ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಹಾಗೇ ಕರುಣಾಕರ ರೆಡ್ಡಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು.
ಇದಕ್ಕೆ ಕಾರಣ ಬಿ.ಶ್ರೀರಾಮುಲು ಅವರ ನಾಯಕತ್ವ ಮತ್ತು ಸಂಘಟನಾ ಸಾಮರ್ಥ್ಯ. 2006ರಲ್ಲಿ ಶ್ರೀರಾಮುಲು (ಬಿಜೆಪಿ-ಜೆಡಿಎಸ್) ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಜವಳಿ ಮತ್ತು ಅಗತ್ಯ ಸೌಲಭ್ಯದ ಕ್ಯಾಬಿನೆಟ್ ಮಂತ್ರಿಯಾಗುತ್ತಾರೆ. 2006 ರಿ೦ದ 2008 ರ ನಡುವೆ ಶ್ರೀರಾಮುಲು ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿರುತ್ತಾರೆ.
2008 ರಲ್ಲಿ ಕರ್ನಾಟಕ ಸಾರ್ವತ್ರಿಕ ಚುನಾವಣೆಗಳಲ್ಲಿ ಶ್ರೀರಾಮುಲು ಮತ್ತೊಮ್ಮೆ ಬಳ್ಳಾರಿ ವಿಧಾನಸಭಾ ಕ್ಷೇತ್ರವನ್ನು ಗೆದ್ದರು. ಅವರ ಪರಿಣಾಮಕಾರಿ ನಾಯಕತ್ವ ಮತ್ತು ಜನಪ್ರಿಯತೆ ಬಿಜೆಪಿ ಬಳ್ಳಾರಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ 8 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತು. ಗದಗ ಜಿಲ್ಲೆಯಲ್ಲಿ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಶ್ರೀರಾಮುಲು ಅವರ ನೇತೃತ್ವದಲ್ಲಿ ಬಿಜೆಪಿ ಗೆದ್ದುಕೊಂಡಿತು. 2008ರಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು ಮತ್ತು ಬಿ ಎಸ್ ಯಡಿಯೂರಪ್ಪ ಕರ್ನಾಟಕದ ಮೊದಲ ಬಿಜೆಪಿ ಮುಖ್ಯಮಂತ್ರಿಯಾದರು. ಸಮರ್ಥ ನಾಯಕತ್ವ ಮತ್ತು ಪಕ್ಷದ ಸಂಘಟನೆಯನ್ನು ಗುರುತಿಸುವ ಮೂಲಕ ಶ್ರೀರಾಮುಲು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕ್ಯಾಬಿನೆಟ್ನಲ್ಲಿ ಸ್ಥಾನ ನೀಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರುವ ಅವರು 2 ಹೊಸ ಯೋಜನೆಗಳನ್ನು ಪರಿಚಯಿಸಿದ್ದರು.
ಆರೋಗ್ಯ ಕವಚ -108 ಆ್ಯಂಬುಲೆನ್ಸ್: ಈ ಯೋಜನೆಯಡಿಯಲ್ಲಿ ಆಕಸ್ಮಿಕ ಗಾಯಳುಗಳ ಅಥವಾ ತುರ್ತು ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರು ಟೋಲ್ ಫ್ರೀ ಸಂಖ್ಯೆ 108ಗೆ ಕರೆ ಮಾಡಿದರೆ 15-20 ನಿಮಿಷಗಳಲ್ಲಿ ಸುಸಜ್ಜಿತ ಆ್ಯಂಬುಲೆನ್ಸ್ ಅಗತ್ಯವಿರುವ ವ್ಯಕ್ತಿಯ ಮನೆ ಬಾಗಿಲಿಗೆ ತಲುಪುತ್ತದೆ. ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ಉಚಿತವಾಗಿ ತಲುಪಿಸುವುದಾಗಿತ್ತು.
ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆ: ಈ ಯೋಜನೆಯಡಿ ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರು ಜಾತಿಯನ್ನು ಲೆಕ್ಕಿಸದೆ. ಕರ್ನಾಟಕದ ಪ್ರಮುಖ ಸೂಪರ್ ಸ್ಪೆಷಾಲಿಟ ಆಸ್ಪತ್ರೆಗಳಲ್ಲಿ ಹೈಟೆಕ್ ವೈದ್ಯಕೀಯ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು 2 ಲಕ್ಷ ರೂ.ವರೆಗೆ ಉಚಿತವಾಗಿ ಪಡೆಯುವ ಯೋಜನೆ ರೂಪಿಸಿದ್ದರು. ಬಿಜೆಪಿಯ ಹಿರಿಯ ಮಾರ್ಗದರ್ಶಕ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಕರ್ನಾಟಕದ ಮೊದಲ ಯೋಜನೆ ಇದಾಗಿತ್ತು. ಈ ಮೂಲಕ ರಾಮುಲು ಜನಪ್ರಿಯತೆ ಇಡೀ ಕರ್ನಾಟಕದಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹರಡಿತು.
2011 ರಲ್ಲಿ ಕರ್ನಾಟಕ ಲೋಕಾಯುಕ್ತ ಶ್ರೀ ಸಂತೋಷ್ ಹೆಗ್ಡೆ ಅವರು ಗಣಿ ವಿಚಾರವಾಗಿ ಕರ್ನಾಟಕ ಸರ್ಕಾರಕ್ಕೆ ವರದಿ ನೀಡಿದ್ದ ಕಾರಣ ಶ್ರೀರಾಮುಲು ಅವರು ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾರಣ ಅವರ ಹೆಸರನ್ನು ಲೋಕಾಯುಕ್ತ ವರದಿಯಲ್ಲಿ ಉಳ್ಲೇಖಿಸಲಾಗಿತ್ತು. ಮತ್ತೆ ನ್ಯಾಯವನ್ನು ಹುಡುಕುತ್ತಾ ರಾಮುಲು ತೆರಳಿದ್ದು, 2011 ರ ನವೆಂಬರ್‌ನಲ್ಲಿ ಬಳ್ಳಾರಿ ವಿಧಾನಸಭಾ ಕ್ಷೇತಕ್ಕ ನಡೆದ ಉಪಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಸ್ವತಂತ್ರ ಅಭ್ಯರ್ಥಿ ಶ್ರೀರಾಮುಲು ಅವರು ಬಳ್ಳಾರಿ ವಿಧಾನಸಭಾ ಕ್ಷೇತ್ರವನ್ನು 17,000 ಮತಗಳ ಅಂತರದಿಂದ ಗೆದ್ದಿದ್ದರು. 2012ರಲ್ಲಿ ಕರ್ನಾಟಕವು ತೀವ್ರ ಬರವನ್ನು ಅನುಭವಿಸಿತ್ತು. ಇದರಿಂದಾಗಿ ನೂರಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು, ರೈತರ ಸಮಸ್ಯೆಗಳನ್ನು ತಿಳಿದುಕೊಂಡು ಮತ್ತು ರೈತರಿಗೆ ಆತ್ಮಸ್ಥೈರ್ಯ, ಧೈರ್ಯವನ್ನು ನೀಡಿದ್ದರು. ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಬೆ೦ಗಳೂರಿಗೆ 55 ದಿನಗಳ ಕಾಲ 100 ಕಿ.ಮೀ. ಪಾದಯಾತ್ರೆ ನಡೆಸಿದ್ದರು. ಇದು ಕರ್ನಾಟಕದಲ್ಲಿ ಮಾಡಿದ ಅತೀ ಉದ್ದದ ಪಾದಯಾತ್ರೆ. ಇದರಿಂದಾಗಿ ಶ್ರೀರಾಮುಲು ಕರ್ನಾಟಕ ರಾಜಕಾರಣದ ಪ್ರಮುಖ ನಾಯಕರಾಗಿ ಹೊರ ಹೊಮ್ಮಿದರು ಮತ್ತು ಕರ್ನಾಟಕದ ಜನರ ಹೃದಯದಲ್ಲಿ
ಶಾಶ್ವತ ಸ್ಥಾನವನ್ನು ಪಡೆದುಕೊಂಡರು.
2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮ ಮಾತೃ ಪಕ್ಷ ಬಿಜೆಪಿಗೆ ಸೇರಿಕೊಂಡು ಈ ದೇಶದ ಪ್ರಧಾನಿಯಾಗಲು ನರೇಂದ್ರ ಮೋದಿಯವರನ್ನು ಬೆಂಬಲಿಸಿದರು. ಸ್ವತಃ ಬಿಜೆಪಿಯಿಂದ ಬಳ್ಳಾರಿ (ಎಸ್ಸಿ) ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ 85,000 ಮತಗಳ ಅಂತರದಿಂದ ಜಯಗಳಿಸಿದರು. 2018ರ ವಿಧಾಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿಸುವ ನಿಟ್ಟಿನೊಂದಿಗೆ ಸುಮಾರು 60 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ವಿಜಯ ಸಾಧಿಸಲು ಶ್ರಮಿಸಿದ ಕೀರ್ತಿ ಶ್ರೀರಾಮುಲು ಅವರಿಗಿ ಸೇರುತ್ತೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೇರಿಸುವ ಪಣ ತೊಟ್ಟು 12 ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ 10,000 ಕ್ಕೂ ಹೆಚ್ಚು ಕಿ.ಮೀ ರಸ್ತೆ ಮಾರ್ಗದ ಪ್ರವಾಸದ ಮೂಲಕ 12 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕೀರ್ತಿ ಸಲ್ಲುತ್ತದೆ.
ಶ್ರೀರಾಮುಲು ಅವರ ಸಾಮಾಜಿಕ ಕೊಡುಗೆ:1991ರಲ್ಲಿ ಶ್ರೀರಾಮುಲು ಬಡವರಿಗೆ ಉಚಿತ ಸಾಮೂಹಿಕ ವಿವಾಹವನ್ನು ಪ್ರಾರಂಭಿಸಿದರು. ಇದನ್ನು ಬಿಜೆಪಿ ಹಿರಿಯ ನಾಯಕಿ ಶ್ರೀಮತಿ ಸುಷ್ಮಾ ಸ್ಟರಾಜ್ ಉದ್ಭಾಟಿಸಿದ್ದರು. 2007ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ತಮ್ಮ ಸ್ವಂತ ಹಣದಿಂದ ವಂಚಿತ ವರ್ಗಗಳಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಪಾರಂಭಿಸಿದರು. ಬಳ್ಳಾರಿಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಮೂಕ ಮತ್ತು ಕಿವುಡ ಮಕ್ಕಳ ಶಾಲೆಗಳನ್ನು ನಡೆಸುತ್ತಿದ್ದಾರೆ.