ಹೊಸಪೇಟೆ: ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ ವ್ಯಕ್ತಿಗೆ ನಗರದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ್ ಅವರು ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 40 ಸಾವಿರ ರೂ. ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹಿನ್ನೆಲೆ:
ಇಲ್ಲಿನ ಎಸ್‌ಆರ್ ನಗರದ ನಿವಾಸಿ ಹೊನ್ನೂರ್ ಬಾಷಾ ಶಿಕ್ಷೆಗೆ ಒಳಗಾದವರು. ಕಳೆದ 2018ರ ಸೆಪ್ಟೆಂಬರ್ 29 ರಂದು ಮೊಹರಂ ಹಬ್ಬದ ನಿಮಿತ್ತ ಶ್ರೀರಾಮಾಲಿಸ್ವಾಮಿ ಮಸೀದಿಗೆ ಹೋಗಿ ವಾಪಸ್ ಬರುತ್ತಿದ್ದ ಜನರಿಗೆ ಮತ್ತು ಮಹಿಳೆಯರಿಗೆ ದಾರಿ ಬಿಡದೇ ಅಡ್ಡ ನಿಂತು, ಅಸಭ್ಯವಾಗಿ ವರ್ತಿಸಿದ್ದನು. ಇದನ್ನು ಗಮನಿಸಿದ್ದ ನೂರ್‌ಬಾಷಾ ಆಕ್ಷೇಪಿಸಿ, ಹೆಣ್ಣು ಮಕ್ಕಳಿಗೆ ದಾರಿಬಿಟ್ಟು ಪಕ್ಕಕ್ಕೆ ಸರಿ ಎಂದು ಗದರಿಸಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಹೊನ್ನೂರ್ ಬಾಷಾ, ನೂರ್‌ಬಾಷಾ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಮಹಿಳೆಯರ ಮುಂದೆ ಮರ‍್ಯಾದೆ ತೆಗೆಯುತ್ತೀಯಾ ಎಂದು ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆಯನ್ನೂ ಒಡ್ಡಿದ್ದಾನೆ.
ಈ ಸುದ್ದಿಯನ್ನೂ ಓದಿ: ಗೂಡಂಗಡಿ ತೆರವು: ಕಾಂಪೌಂಡ್ ನಿರ್ಮಾಣದ ಸ್ಥಳದಲ್ಲೇ ಮಲಗಿ ಯುವತಿ ಪ್ರತಿಭಟನೆ
ಅಲ್ಲದೇ, ಮರು ದಿನ ನಡುರಾತ್ರಿ 1.30 ಗಂಟೆ ಸುಮಾರಿಗೆ ನೂರ್‌ಬಾಷಾ ಮನೆಯತ್ತ ಹೋಗುತ್ತಿದ್ದ ವೇಳೆ ನೀಲಕಂಠೇಶ್ವರ ಗುಡಿಯ ಮುಂದೆ ಏಕಾಏಕಿ ತಡೆದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಕುರಿತು ಆರೋಪಿ ಹೊನ್ನೂರ್‌ಬಾಷಾ ವಿರುದ್ಧ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪಿಎಸ್‌ಐ ಎ.ಜಿ. ಗಡಗಡೆ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇನ್ನೂ ಸರ್ಕಾರಿ ಅಭಿಯೋಜಕ ಎಂ.ಬಿ. ಸುಂಕಣ್ಣ ವಾದ ಮಂಡಿಸಿದ್ದಾರೆ.
ಸದ್ಯ ಹೊನ್ನೂರ್ ಬಾಷಾಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 40 ಸಾವಿರ ರೂ. ಗಳ ದಂಡ ವಿಧಿಸಿ ತೀರ್ಪು ನೀಡಲಾಗಿದೆ.