ಬಳ್ಳಾರಿ: ಬೆಂಗಳೂರು ಮಹಾ ನಗರದ ಪುಲಿಕೇಶಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಮೇಲಿನ ದಾಳಿ ಪ್ರಕರಣವು ದುರುದ್ದೇಶದಿಂದ ಕೂಡಿದ್ದು, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯ ರಾಜ್ಯ ಸಮಿತಿ ಆಗ್ರಹಿಸಿದೆ.
ಜಿಲ್ಲೆಯಲ್ಲಿಂದು ಭೋವಿ (ವಡ್ಡರ) ಯುವ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ವೈ.ಕೊಟ್ರೇಶ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಮೇಲೆ ದಾಳಿ ನಡೆಸಿರೋದು ಅಕ್ಷಮ್ಯ ಅಪರಾಧವಾಗಿದೆ. ಅವರ ಮನೆಯ ಜೊತೆ ಜೊತೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯುಂಟು ಮಾಡಿದ್ದಲ್ಲದೇ, ಪೊಲೀಸ್ ಕ್ವಾಟರ್ಸ್ ಹಾಗೂ ಪತ್ರಕರ್ತರ ಮೇಲೂ ಕೂಡ ದಾಳಿ ನಡೆಸಿದ್ದಾರೆ. ಹೀಗಾಗಿ, ಕೂಡಲೇ ಈ ದಾಳಿ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲ ಅಂದ್ರೆ, ರಾಜ್ಯ ಸರ್ಕಾರದ ವೈಫಲ್ಯತೆಯನ್ನು ವಿರೋಧಿಸಿ ಬಳ್ಳಾರಿಯ ಕನಕ ದುರ್ಗಮ್ಮ ದೇಗುಲದಿಂದ ಪಾದಯಾತ್ರೆ ಮೂಲಕ ರಾಜ ಭವನ ಚಲೋ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸದಿದ್ದರೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟಿನಲ್ಲಿ ಹಾಕುವ ಮೂಲಕ ಒತ್ತಡ ಹೇರಲಾಗುವುದೆಂದರು. ಕೇಂದ್ರ ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿದ್ದಾರೆ.