ಬಳ್ಳಾರಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಪ್ರತಿ ವಲಸಿಗರಿಗೆ ಅಕ್ಕಿ ಮತ್ತು ಕಡಲೆಕಾಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಲಸಿಗರು ದೇಶದ ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರದ ಹಾಗೂ ಪಡಿತರ ಪಡೆಯದ ವಲಸಿಗರಿಗೆ ಈ ಯೋಜನೆ ಅನ್ವಯಿಸುತ್ತದೆ. 2020ರ ಮೇ ಹಾಗೂ ಜೂನ್ ತಿಂಗಳಲ್ಲಿ ಪ್ರತಿ ವಲಸಿಗರಿಗೆ ತಲಾ 5 ಕೆಜಿ ಅಕ್ಕಿ ಹಾಗೂ ಜೂನ್ ತಿಂಗಳಲ್ಲಿ ಪ್ರತಿ ಕುಟುಂಬಕ್ಕೆ ಕಡಲೆಕಾಳು ಸಹ ಉಚಿತವಾಗಿ ವಿತರಿಸಲಾಗುವುದು. ಮೇ ತಿಂಗಳಲ್ಲಿ ಪಡಿತರ ಪಡೆಯಲಾಗದ ವಲಸಿಗರಿಗೆ ಜೂನ್ ತಿಂಗಳಲ್ಲಿ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಸೇರಿಸಿ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಮತ್ತು ಕಡಲೆಕಾಳು ಸೇರಿಸಿ ನೀಡಲಾಗುವುದು. ಮೇ ತಿಂಗಳ ಪಡಿತರವನ್ನು ಮೇ 26ರಿಂದ ಮೇ 31ರವರೆಗೆ ಹಾಗೂ ಜೂನ್ ತಿಂಗಳ ಪಡಿತರವನ್ನು ಜೂ. 1ರಿಂದ ಜೂ. 10ರವರೆಗೆ ವಿತರಿಸಲಾಗುವುದು. ವಲಸಿಗರಿಗೆ ತಾಲೂಕಿನ ನಗರ, ಪಟ್ಟಣ, ಹೋಬಳಿ, ಪಂಚಾಯತ್ ಮಟ್ಟದ ಆಯ್ದ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತದೆ. ವಲಸಿಗರು ನ್ಯಾಯಬೆಲೆ ಅಂಗಡಿಗೆ ಹೋಗಿ ತಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನೀಡಬೇಕು. ಆಧಾರ್ ಪರಿಶೀಲನೆಯಲ್ಲಿ ವಲಸಿಗರು ಪಡಿತರ ಚೀಟಿ ಹೊಂದಿಲ್ಲದಿರುವ ಬಗ್ಗೆ ಖಚಿತವಾದ ನಂತರ ಅವರು ಉಚಿತ ಪಡಿತರಕ್ಕೆ ಅರ್ಹರೆಂಬ ಸಂದೇಶ ಅವರ ಮೊಬೈಲ್‌ಗೆ ಬರಲಿದೆ. ಈ ಒಟಿಪಿ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಗೆ ನೀಡಿದ ನಂತರ ಅವರು ಒಟಿಪಿ ದಾಖಲಿಸಿ ಪಡಿತರವನ್ನು ನೀಡಲಾಗುತ್ತದೆ ಎಂದರು
ವಲಸಿಗರಿಗೆ ಪಡಿತರ ವಿತರಿಸಲು ಪ್ರತಿ ತಾಲೂಕಿನ ಆಯ್ದ ಪ್ರದೇಶಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ವಲಸಿಗರು ತಮಗೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯಬೇಕು. ಯಾವುದೇ ಪ್ರದೇಶದಲ್ಲಿ ವಲಸಿಗರ ಸಂಖ್ಯೆ ಹೆಚ್ಚಿಗೆ ಇದ್ದು, ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯಲು ತೊಂದರೆಗಳಿದ್ದರೆ ವಲಸಿಗರಿರುವ ಸ್ಥಳಗಳಿಗೆ 'ಸಂಚಾರಿ ನ್ಯಾಯಬೆಲೆ ಅಂಗಡಿ'ಗಳ ಮೂಲಕ ಪಡಿತರ ವಿತರಿಸಲಾಗುತ್ತದೆ. ವಲಸಿಗರಿಗೆ ವಿತರಿಸುವ ಪಡಿತರ ಉಚಿತವಾಗಿದ್ದು, ಹಣ ನೀಡಬೇಕಾಗಿಲ್ಲ. ಈ ಯೋಜನೆಯಡಿ ಉಚಿತ ಪಡಿತರವನ್ನು ರಾಜ್ಯದ ಅಥವಾ ಹೊರ ರಾಜ್ಯದ ಪಡಿತರ ಚೀಟಿ ಇಲ್ಲದ ವಲಸೆ ಜನರು ಮಾತ್ರ ಪಡೆಯಬಹುದು.