ಬಳ್ಳಾರಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ಪುಣ್ಯ ಸ್ಮರಣೆ ನಿಮಿತ್ತ ನಗರದ ಎಸ್ಪಿ ವೃತ್ತದ ಬಳಿಯಿರುವ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಅಟಲ್ ಜೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಶಾಸಕ ಜಿ.ಸೋಮಶೇಖರರೆಡ್ಡಿಯವರು ಶಾಂತಿ ಶಿಶುವಿಹಾರ ಶಾಲೆಯ ಒಂದರಿಂದ ಎಂಟನೇ ತರಗತಿಯ ಅಂದಾಜು 350 ವಿದ್ಯಾರ್ಥಿಗಳಿಗೆ ತಲಾ ಎರಡು ಜೊತೆ ಸಮವಸ್ತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಸೋಮಶೇಖರರೆಡ್ಡಿ, ನಾನೂ ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದು. ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಾಗೂ ಕಾಲೇಜು ಹಂತ ಮಾತ್ರ ವೀರಶೈವ ಕಾಲೇಜಿನಲ್ಲಿ ಅಭ್ಯಾಸ ಮಾಡಿದೆ. ಅದು ಕೂಡ ಒಂದು ರೀತಿಯಲ್ಲಿ ಸರ್ಕಾರಿ ಕಾಲೇಜಿನಂತೆ ಇತ್ತು. ಹೀಗಾಗಿ ನೀವೆಲ್ಲ ಸರ್ಕಾರಿ ಶಾಲೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ, ಉನ್ನತ ಹುದ್ದೆಗಳನ್ನು ಅಲಂಕರಿಸಿ ಎಂದು ಹಾರೈಸಿದರು.
ಶಾಲಾ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ವಿತರಣೆ: ಹಾಲು, ಮೊಟ್ಟೆ ಹಾಗೂ ಬಿಸಿಯೂಟ ನೀಡುತ್ತಾರಲ್ಲ ಎಂದು ಶಾಸಕ ರೆಡ್ಡಿಯವರು, ಶಾಲೆಯ ಮುಖ್ಯಶಿಕ್ಷಕರನ್ನು ಕೇಳಿ, ಮುಂದಿನ ದಿನಗಳಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಪೂರೈಕೆಗೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬಂತೆ ನಮ್ಮ ಸಂಪಾದನೆ ಆಗಬಾರದು. ಪ್ರತಿಯೊಬ್ಬರು ತಾನು ದುಡಿದಿದ್ದರಲ್ಲಿ ಕಿಂಚಿತ್ತಾದರೂ ಸಾಮಾಜಿಕ ಸೇವೆಗೆ ಬಳಸಿಕೊಳ್ಳಬೇಕೆಂದು ಪರೋಕ್ಷವಾಗಿ ಧನಿಕರಿಗೆ ಎಚ್ಚರಿಕೆ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರೈತಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡರು, ಪಾಲಿಕೆಯ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ವರುಣ್ ಎಂಟರ್ ಪ್ರೈಸಸ್ ನ ಕೆ.ಲಿಂಗಣ್ಣ, ಸುಮಾರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಒ ಖೈರುನ್ನೀಸಾ ಬೇಗಂ ಸೇರಿದಂತೆ ಇತರರು ಭಾಗವಹಿಸಿದ್ದರು.