ಬಳ್ಳಾರಿ: ರೇಷನ್ ಕಿಟ್ ಕೊಡುವಂತೆ ಕೇಳಿದ್ದಕ್ಕೆ ವಿಧವೆಯೊಬ್ಬರಿಗೆ ಐದಾರು ಜನರ ಗ್ಯಾಂಗ್ವೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಬೆಳಗಲ್ಲು ತಾಂಡಾದ ನಿವಾಸಿಯಾದ ಮೋತಿ ಬಾಯಿ (38) ಎನ್ನುವ ವಿಧವೆಯು ಥಳಿತಕ್ಕೊಳಗಾದವರು.
ಲಾಕ್ಡೌನ್ ಹಿನ್ನಲೆ ಸ್ಪಾಂಜ್ ಐರನ್ ಕಂಪನಿಯವರು ನೀಡಿರುವ ರೇಷನ್ ಕಿಟ್ ಕೊಡುವಂತೆ ಕೇಳಿದ್ದಕ್ಕೆ ಮನೆಗೆ ನುಗ್ಗಿ ಥಳಿಸಿದ್ದಾರೆ. ಅರೆ ಪ್ರಜ್ಞಾಸ್ಥಿತಿಯಲ್ಲಿದ್ದ ಮಹಿಳೆಯನ್ನು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಬೆಳಗಲ್ಲು ತಾಂಡಾದ ನಿವಾಸಿಗಳಾದ ಲೇಬರ್ ಕಾಂಟ್ರ್ಯಾಕ್ಟರ್ ರಾಮುನಾಯ್ಕ, ಲಾರಿ ಮಾಲೀಕರಾದ ಬಾಬು ನಾಯ್ಕ, ವೆಂಕಟೇಶ ನಾಯ್ಕ, ಲಕ್ಷ್ಮಣ ನಾಯ್ಕ ಹಾಗೂ ತೇಜುನಾಯ್ಕ ಎಂಬುವರು ಮೋತಿಬಾಯಿ ಅವರನ್ನು ಥಳಿಸಿರುವ ಆರೋಪಿಗಳು. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಮೋತಿಬಾಯಿ ಅವರು ಪ್ರತಿಕ್ರಿಯಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ತಮ್ಮ ಅಳಲನ್ನು ತೋಡಿಕೊಂಡರು.