ಹೊಸಪೇಟೆ: ಗ್ರಾಮೀಣ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಖದೀಮರ ಹೆಡೆಮುರಿ ಕಟ್ಟಿದ್ದಾರೆ. ಹೊಸಪೇಟೆಯ ಹುಲಗಪ್ಪ ಹಾಗೂ ಆಸೀಫ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 15,80,000 ನಗದು ಹಾಗೂ 10 ಗ್ರಾಂ ಬಂಗಾರದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದು, ಚಿನ್ನದ ಮೌಲ್ಯ 44,000 ರೂ. ಎಂದು ಅಂದಾಜಿಸಲಾಗಿದೆ.
ನವೆಂಬರ್ 06 ರಂದು ಹಂಪಿ ರಸ್ತೆಯಲ್ಲಿನ ಮುನೀರ್ ಟ್ರ್ಯಾಕ್ಟರ್ ಶೋ ರೂಂನಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು. ಈ ವೇಳೆ 16 ಲಕ್ಷ ನಗದು ಹಾಗೂ ಗ್ರಾಹಕರು ಅಡವಿಟ್ಟಿದ್ದ 10 ಗ್ರಾಂ ಬಂಗಾರದ ನಾಣ್ಯಗಳನ್ನು ದೋಚಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಐದು ದಿನಗಳಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಲಾವಣ್ಯ, ಡಿವೈಎಸ್ಪಿ ರಘುಕುಮಾರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಕಳ್ಳರನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆಯ ಪಿಐ ಶ್ರೀನಿವಾಸ ಮೇಟಿ, ಸಿಬ್ಬಂದಿ ಎಚ್.ಸಿ.ಬಿ.ರಾಘವೇಂದ್ರ, ಮಾಣಿಕ್ಯ ರೆಡ್ಡಿ, ಎ.ಕೊಟ್ರೇಶ್ ಅವರು ಯಶಸ್ವಿಯಾಗಿದ್ದಾರೆ.