ಹೊಸಪೇಟೆ : ನಗರದ ಉಪವಿಭಾಗಧಿಕಾರಿ ಕಚೇರಿಯ ಎದುರು ಇಂದು ಮಧ್ಯಾಹ್ನ ಪೊಲೀಸರು ಮತ್ತು ರೈತರ ನಡುವೆ ಪ್ರತಿಭಟನೆಗೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು. ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ಹಿನ್ನೆಲೆಯಲ್ಲಿ ಹೊಸಪೇಟೆ ಉಪವಿಭಾಗದ ಕಚೇರಿ ಮುಂದೆ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಕಚೇರಿ ಮುಂದೆ ಕೆಲ ರೈತರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಯಾರೊಬ್ಬರೂ ಕೂಡ ಮನವಿ ಸ್ವೀಕರಿಸಲು ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕಚೇರಿ ಬಳಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಇದರಿಂದ ಆಕ್ರೋಶಗೊಂಡ ಬಡಾವಣೆ ಪೊಲೀಸ್ ಠಾಣೆಯ ಪಿಐ ಜಡಿಯಪ್ಪ ಅವರು, ರಸ್ತೆಯಲ್ಲಿ ಪ್ರತಿಭಟನೆ ಮಾಡಲು ಯಾರು ಅನುಮತಿ ನೀಡಿದ್ದಾರೆ ಎಂದು ರೈತರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೆಲ ಕಾಲ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು.
ಬಳಿಕ ಪೊಲೀಸ್ ಮೇಲಾಧಿಕಾರಿಯೊಬ್ಬರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್ ಅವರೊಂದಿಗೆ ಫೋನ್ ಕರೆ ಮೂಲಕ ಮಾತನಾಡಿದರು. ಈ ವೇಳೆ ಜೆ. ಕಾರ್ತಿಕ್, ದೇಶದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಹೊಸಪೇಟೆಯಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು. ಇಲ್ಲದಿದ್ದರೆ ರಸ್ತೆಯಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅನುಮತಿ ಕೊಡಿ: ಸ್ಪೀಕರ್ಗೆ ಸಾ.ರಾ.ಮಹೇಶ್ ಪತ್ರ
ಕೆಲ ಸಮಯದ ಬಳಿಕ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಶ್ರೀಧರ ಅವರು ರೈತರಿಂದ ಮನವಿ ಸ್ವೀಕರಿಸಿದರು. ಬಳಿಕ ರೈತರು ಪ್ರತಿಟನೆಯನ್ನು ಕೈ ಬಿಟ್ಟರು.