ಬಳ್ಳಾರಿ: ಗಣಿನಾಡು ಬಳ್ಳಾರಿಯ ಪುನೀತ್ ಅಭಿಮಾನಿಗಳು 'ಗಂಧದಗುಡಿ' ಚಿತ್ರವನ್ನು ವಿನೂತನವಾಗಿ ಸ್ವಾಗತ ಮಾಡಲು ಸಿದ್ಧರಾಗುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಕಳೆಯುತ್ತ ಬಂದಿದೆ. ಇದೇ ಸಮಯದಲ್ಲಿ ಅವರು ಅಭಿನಯಿಸಿರುವ ಕೊನೆಯ ಚಿತ್ರ ಗಂಧದಗುಡಿ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ.
ಉಚಿತ ಸಿನಿಮಾ ವೀಕ್ಷಣೆ: ಇದೇ ಕಾರಣಕ್ಕೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅವರಿಗೆ ಅಭಿಮಾನವನ್ನು ತೋರಿಸುತ್ತಿದ್ದಾರೆ. ಗಣಿನಾಡು ಬಳ್ಳಾರಿಯ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದವರು ಗಂಧದಗುಡಿ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲು ಸಜ್ಜಾಗಿದ್ದಾರೆ. ಇದೇ 28 ರಂದು ಚಿತ್ರ ತೆರೆ ಮೇಲೆ ಬರಲಿದೆ. ಹಾಗಾಗಿ ಅಪ್ಪು ಅಭಿಮಾನಿಗಳು ಸರ್ಕಾರಿ ಶಾಲಾ ಮಕ್ಕಳಿಗೆ ಗಂಧದಗುಡಿ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡಲಿದ್ದಾರೆ.
ಅಭಿಮಾನಿಗಳ ಹಣದಿಂದ ಚಿತ್ರಮಂದಿರ ಬುಕ್: ನವೆಂಬರ್ ಒಂದರಂದು ಬಳ್ಳಾರಿ ತಾಲೂಕಿನ ಸುಮಾರು 30 ಹಳ್ಳಿಯ ಮಕ್ಕಳಿಗೆ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡಲಿದ್ದಾರೆ. ಅಪ್ಪು ಅಭಿಮಾನಿ ಬಳಗದ ಎಲ್ಲ ಸದಸ್ಯರು ಸ್ವಂತ ಹಣದಿಂದ ಚಿತ್ರಮಂದಿರ ಬುಕ್ ಮಾಡಿದ್ದು, ಸುಮಾರು ಮೂವತ್ತು ಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಟಿಕೆಟ್ ಬುಕ್ ಮಾಡಿದ್ದಾರೆ.
ಅಭಿಮಾನಿಗಳ ಮನವಿ: ಇನ್ನು ಗಂಧದಗುಡಿ ಒಂದು ಸಾಕ್ಷ ಚಿತ್ರವಾಗಿದ್ದು, ನಮ್ಮ ನಾಡಿನ ಅರಣ್ಯ ಸಂಪತ್ತು, ಕಾಡು ಪ್ರಾಣಿಗಳ ಬಗೆಗಿನ ಚಿತ್ರ ಇದಾಗಿದೆ. ರಾಜ್ಯದ ಜನತೆ ಮಿಸ್ ಮಾಡದೇ ಈ ಚಿತ್ರವನ್ನು ನೋಡುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ. ಅಲ್ಲದೇ ಸರ್ಕಾರವೇ ಮುತುವರ್ಜಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಫ್ರೀ ಟಿಕೆಟ್ ನೀಡಿ, ಚಿತ್ರ ವೀಕ್ಷಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲೂ ನಡೆದಿತ್ತು ಅಪ್ಪು 'ಗಂಧದಗುಡಿ' ಶೂಟಿಂಗ್: ಕಳ್ಳಬೇಟೆ ಶಿಬಿರಗಳು ಸೆರೆ
ಇನ್ನು, ಅಭಿಮಾನಿಗಳು ಚಿತ್ರಮಂದಿರದಲ್ಲಿ ಪಟಾಕಿ ಹೊಡೆದು ಹಣ ಹಾಳು ಮಾಡುವ ಬದಲು, ಚಿತ್ರವನ್ನು ನೋಡಲು ಸಾಧ್ಯವಾಗದ ಬಡ ಮಕ್ಕಳಿಗೆ ತೋರಿಸಿ ಅಭಿಮಾನಿ ಮೆರೆಯುವಂತೆ ಮನವಿ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಒಂದು ಸಾಕ್ಷ ಚಿತ್ರವಾದರೂ, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಪ್ಪು ಅಭಿನಯದ ಕೊನೆಯ ಚಿತ್ರ ಇದಾದ ಕಾರಣ ಚಿತ್ರ ವೀಕ್ಷಣೆ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.