ಬಳ್ಳಾರಿ: ಇಲ್ಲಿನ ಡಿಸಿ ಕಚೇರಿಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಆನಂದ ಸಿಂಗ್ ಅವರನ್ನ ಭೇಟಿ ಮಾಡಿದ ಕರಡಿ ಆಡಿಸುವ ಬುಡಕಟ್ಟು ಜನಾಂಗದವರು ನಿವೇಶನ ಮಂಜೂರಾತಿ ಮಾಡುವಂತೆ ಸಚಿವರ ಬಳಿ ಮನವಿ ಮಾಡಿದರು.
ಬುಡಕಟ್ಟು ಜನಾಂಗದವರ ಪರವಾಗಿ ಬಂದಿದ್ದ ಪ್ರೊ. ಮಲ್ಲಿಕಾರ್ಜುನ ಅವರು ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ನಿವೇಶನ ಕೋರಿ ಅನೇಕ ಬಾರಿ ಮನವಿ ಮಾಡಿದರು ಸಹ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು, ಅಲ್ಲಿ ನೆಲೆಸಿರುವ ಎಲ್ಲರಿಗೂ ನಿವೇಶನ ಮಂಜೂರಾತಿಯಾಗಿದೆ ಅಂತ ನಮಗೆ ಹೊಸಪೇಟೆ ತಾಲೂಕಾಡಳಿತ ಪತ್ರ ಬರೆದಿದೆ. ಹಾಗಾಗಿ, ಎಷ್ಟು ಮಂದಿಗೆ ನಿವೇಶನ ಇಲ್ಲ ಎಂಬುದರ ಮಾಹಿತಿ ಕಲೆ ಹಾಕಿ ಸವಿವರವಾದ ಪಟ್ಟಿಯನ್ನ ನಮಗೆ ಕೊಡಿ. ಪರಿಶೀಲಿಸಿ ನಿವೇಶನ ಮಂಜೂರಾತಿ ಮಾಡಲು ಕ್ರಮಕೈಗೊಳ್ಳುವುದಾಗಿ ಡಿಸಿ ನಕುಲ್ ಭರವಸೆ ನೀಡಿದರು.
ಇದಲ್ಲದೇ, ಭೂ ಮಾಫಿಯಾಗಳಿಂದ ನಿವೇಶನಗಳು ಒತ್ತುವರಿಯಾಗುತ್ತಿವೆ ಎಂದು ಡಿಸಿ ಅವರು ಸಚಿವರ ಗಮನ ಸೆಳೆದರು. ಇದಕ್ಕೆ ಸಚಿವ ಆನಂದ್ ನೀವು ಒಳ್ಳೆಯ ಹೋರಾಟವನ್ನ ಕೈಗೆತ್ತಿಕೊಂಡೀರಿ. ಅಲ್ಲಿ ನೆಲೆಸಿರುವ ಜನಸಂಖ್ಯೆ ಎಷ್ಟು? ಎಷ್ಟುಮಂದಿಗೆ ನಿವೇಶನ ಇದೆ. ಅಥವಾ ಇಲ್ಲವೋ ಅಂತ ವಿವರಣೆ ಕೊಡಿ. ಆ ಕುರಿತು ಒಂದು ಲಿಸ್ಟ್ ಮಾಡಿಕೊಡಿ. ಅದರ ಮಂಜೂರಾತಿಗೆ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.