ಬಳ್ಳಾರಿ: ಕಾಂಗ್ರೆಸ್ನ ಮಾಜಿ ಶಾಸಕ ಅನಿಲ್ ಲಾಡ್ ಅವರು ಬಹಳ ಹಾಸ್ಯ ಮಾಡ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಹೊಸಪೇಟೆ ನಗರದ ಪ್ರದೇಶದಲ್ಲಿಂದು ಮತಯಾಚನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಅವರು ಬಹಳ ಹಾಸ್ಯ ಮಾಡ್ತಾರೆ. ಆದ್ರೆ ಯಾವುದು ಹಾಸ್ಯ, ಯಾವುದು ನಿಜ ಅಂತಾ ಅರ್ಥ ಆಗಲ್ಲವೆಂದು ಹೇಳಿದರು. ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ವಿಚಾರವಾಗಿ ಕೈಗೊಂಡಿದ್ದ ಹೋರಾಟದ ಬಗ್ಗೆ ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಹಾಗೂ ಬಿಜೆಪಿ ಸೇರ್ಪಡೆ ಕುರಿತು ಆನಂದ್ಸಿಂಗ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಅಷ್ಟೇ ಅಲ್ಲದೇ, ಅನಿಲ್ ಲಾಡ್ ಅವರನ್ನ ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿಯೇ ಇಲ್ಲ. ಇದು ಶುದ್ಧಸುಳ್ಳು. ನನ್ನ ಬೇಡಿಕೆಗಳನ್ನ ಬಿಜೆಪಿಯವರು ಈಡೇರಿಸುತ್ತೇವೆ ಅಂದಿದ್ದಕ್ಕೆ ಬಿಜೆಪಿ ಸೇರಿದೆ. ನಾನು ಬಿಜೆಪಿ ಸೇರುವ ಪ್ಲಾನ್ ಮಾಡಿಕೊಂಡು ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹೀಗಿದ್ದಾಗ ನಾನು ಅನಿಲ್ ಲಾಡ್ ಅವರನ್ನ ಬಿಜೆಪಿಗೆ ಯಾವ ಹಕ್ಕಿನ ಮೇಲೆ ಕರೆಯಲಿ. ಆನಂದ್ ಸಿಂಗ್ ಪಿಎಗಳು ದಾರಿ ತಪ್ಪಿದ್ದಾರೆ ಎಂದು ಅನಿಲ್ ಲಾಡ್ ಆರೋಪಿಸಿದ್ದಾರೆ. ತಪ್ಪೇನಿದೆ ಅಂತ ಲಾಡ್ ಹೇಳಿದರೆ ಸರಿಪಡಿಸಬಹುದು. ನಾನು ಯಾವ ಸೂರ್ಯನೂ ಅಲ್ಲ, ಚಂದ್ರನೂ ಅಲ್ಲ, ಯಾರನ್ನೂ ಸುಡಲ್ಲ. ನಾನು ಅಷ್ಟು ದೊಡ್ಡ ವ್ಯಕ್ತಿಯೂ ಅಲ್ಲವೆಂದು ಲಾಡ್ ಹೇಳಿಕೆಗೆ ಆನಂದ್ ಸಿಂಗ್ ತಿರುಗೇಟು ನೀಡಿದ್ದಾರೆ.