ಹೊಸಪೇಟೆ: ಮಾಧ್ಯಮಗಳಲ್ಲಿ ನಾನು ರಾಜೀನಾಮೆ ನೀಡುವ ಕುರಿತು ಸುದ್ದಿಗಳು ಬರುತ್ತಿವೆ. ಆದರೆ ಸಚಿವ ಸ್ಥಾನಕ್ಕಾಗಿ ನಾನು ಬೇಡಿಕೆ ಇಟ್ಟಿಲ್ಲ. ವಿಜಯನಗರ ಜಿಲ್ಲೆ ಹಾಗೂ ಏತನೀರಾವರಿ ಯೋಜನೆಗೆ ನನ್ನ ಬೇಡಿಕೆ, ಅದನ್ನು ಈಡೇರಿಸಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಅವರು ಸುದ್ದಿಗಾರೊಂದಿಗೆ ಮಾತನಾಡಿದರು. ಕ್ಷೇತ್ರದ ಜನರು ನಾನು ಯಾವುದೇ ಪಕ್ಷಕ್ಕೆ ಹೋದರೂ ಗೆಲ್ಲಿಸುತ್ತಿದ್ದಾರೆ. ಇದರ ಮುಂದೆ ಸಚಿವ ಸ್ಥಾನ ಸಣ್ಣದು. ಸರಕಾರ ನಮ್ಮದೇ ಇದೆ, ಸಚಿವ ಸ್ಥಾನ ಇಲ್ಲದಿದ್ದರೂ ಕೆಲಸ ಮಾಡಿಕೊಳ್ಳಬಹುದು. ಎಲ್ಲಾ ಕೆಲಸಗಳನ್ನು ಪೂರೈಸಿಕೊಳ್ಳುವ ವಿಶ್ವಾಸವಿದೆ. ನಾನು ಯಾರ ಮುಂದೆಯೂ ಅಸಮಾಧಾನ ತೋಡಿಕೊಂಡಿಲ್ಲ, ಅದರ ಅವಶ್ಯಕತೆ ಇಲ್ಲ ಎಂದರು.
ಒಂದು ವೇಳೆ ಅಸಮಾಧಾನ ಹೆಚ್ಚಾಗಿದ್ದರೆ ಅಸಮಾಧಾನಿತರಿಗೆ ನನ್ನ ಖಾತೆಯನ್ನು ನೀಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ನಾವು ಸರಕಾರದ ಜತೆಗೆ ಇದ್ದೇವೆ. ಅಲ್ಲದೇ, ಯಡಿಯೂರಪ್ಪ ಅವರು ಗಣರಾಜ್ಯೋತ್ಸವ ಬಳಿಕ ಬೆಂಗಳೂರಿಗೆ ಬನ್ನಿ ಎಂದಿದ್ದಾರೆ. ಅವರ ತೀರ್ಮಾನ ಹಾಗೂ ಆದೇಶ ಪಾಲಿಸಲಾಗುವುದು ಎಂದು ಹೇಳಿದರು.
ಇನ್ನು ವಿಜಯನಗರ ಜಿಲ್ಲೆಯ ಬಗ್ಗೆ ಪರಿಶೀಲನೆ ನಡೆಯಬೇಕು. ತಾಂತ್ರಿಕವಾಗಿ ಹಾಗೂ ಕಾನೂನು ಬದ್ಧವಾಗಿ ಘೋಷಣೆ ಮಾಡಬೇಕಾಗುತ್ತದೆ, ವಿಳಂಬವಾಗುತ್ತಿಲ್ಲ. ಕೆಲಸ ನಡೆಯುತ್ತಿದೆ ಎಂದು ಆನಂದ್ ಸಿಂಗ್ ತಿಳಿಸಿದರು.
ಇದನ್ನೂ ಓದಿ:ವೈದ್ಯಕೀಯ ಖಾತೆ ಮರಳಿ ನೀಡುವುದಾಗಿ ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ: ಸುಧಾಕರ್