ವಿಜಯನಗರ: ನಾನು ಯಾವುದೇ ರೀತಿಯ ಅಪರಾಧ ಮಾಡಿಲ್ಲ. ನನ್ನ ವಿರುದ್ಧ ಪೋಲಪ್ಪ ಮಾಡಿರುವ ಆರೋಪ ನಿರಾಧಾರ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದರು.
ಹೊಸಪೇಟೆಯಲ್ಲಿ ಶನಿವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಉಗ್ರಪ್ಪ ಅವರು ಪತ್ರಿಕೆಯಲ್ಲಿ ಬಂದ ಆರೋಪವನ್ನಿಟ್ಟು ಮಾತನಾಡುತ್ತಿದ್ದಾರೆ. ಒಂದು ವೇಳೆ ಆನಂದ್ ಸಿಂಗ್ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಜಿಲ್ಲಾಧಿಕಾರಿ, ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರದವರು ದಾಖಲೆ ಸಮೇತ ದೂರು ಕೊಡಲಿ. ನನ್ನ ಮನೆ ಸರ್ಕಾರಿ ಜಾಗದಲ್ಲಿದ್ದರೆ ಅವರೇ ನಿಂತು ಮಾರ್ಕಿಂಗ್ ಮಾಡಿಸಲಿ ಎಂದರು.
ಪೋಲಪ್ಪ ನನ್ನ ವಿರುದ್ಧ ಯಾವುದೇ ಕಾನೂನು ಹೋರಾಟ ಮಾಡುತ್ತಿಲ್ಲ. ಹೊಸಪೇಟೆ ನಗರದಲ್ಲಿ ಕೆಲವು ಭೂಗಳ್ಳರು ಅವರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ಮೂಲಕ ದೂರು ಕೊಡಿಸಿ ಪಾರಾಗುತ್ತಿದ್ದಾರೆ ಅಷ್ಟೇ. ಇದು ಭೂ ಕಬಳಿಸುವವರ ಕುತಂತ್ರ. ನಾನು ಪೋಲಪ್ಪ ಕುಟುಂಬಕ್ಕೆ ಯಾವುದೇ ರೀತಿಯ ದೌರ್ಜನ್ಯ ಮಾಡಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಜೀವ ಬೆದರಿಕೆ ಪ್ರಕರಣ : ಆನಂದ್ ಸಿಂಗ್ ಸೇರಿ ನಾಲ್ವರ ವಿರುದ್ಧ ದೂರು ದಾಖಲು
ನನ್ನ ವಿರುದ್ಧ ಬೆದರಿಕೆ, ಜಾತಿ ನಿಂದನೆ ಆರೋಪ ಮಾಡಿದ್ದಾರೆ. ಅದನ್ನು ಸಾಕ್ಷ್ಯಸಮೇತ ರುಜುವಾತುಪಡಿಸಲಿ. ಈ ಕುರಿತು ಮುಖ್ಯಮಂತ್ರಿಗಳು ಕೂಡ ನನ್ನೊಂದಿಗೆ ಮಾತನಾಡಿದ್ದಾರೆ. ಇರುವ ಸಂಗತಿಯನ್ನು ಅವರಿಗೂ ವಿವರಿಸಿರುವೆ. ಇನ್ನೆರಡು ದಿನದಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ನನ್ನ ಮನೆಯ ವಿಚಾರವಾಗಿ ಈ ಹಿಂದೆ ಆರ್ ಟಿ ಐ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ಕೇಸ್ ಹಾಕಿದ್ದರು. ಅದರಲ್ಲಿ ಸತ್ಯಾಂಶ ಇಲ್ಲ ಎಂದು ಲೋಕಾಯುಕ್ತರೇ ಹೇಳಿದ್ದಾರೆ. ನಾನು ಕೂಡ ಎಲ್ಲಾ ದಾಖಲೆಗಳನ್ನಿಟ್ಟುಕೊಂಡೇ ಮಾಧ್ಯಮದ ಮುಂದೆ ಬರುವೆ. ಈ ವಿಚಾರದಲ್ಲಿ ಉಗ್ರಪ್ಪನವರು ಯಾರೋ ಕಾಯಿಸಿದ ಹಂಚಿನ ಮೇಲೆ ದೋಸೆ ಹಾಕಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಆರೋಪ ಅಲ್ಲಗಳೆದ ಆನಂದ್ ಸಿಂಗ್: ಅಕ್ರಮ ಬಯಲಿಗೆಳೆದಿದ್ದಕ್ಕೆ ಜೀವ ಬೆದರಿಕೆ ಎಂದ ಪೋಲಪ್ಪ