ಬಳ್ಳಾರಿ: ನಗರದಲ್ಲಿನ ಪ್ರತಿಷ್ಠಿತ ಖಾಸಗಿ ಹೋಟೆಲ್ವೊಂದರಲ್ಲಿ ಸಿಂಧನೂರು ಮಾಜಿ ಶಾಸಕ ಬಾದರ್ಲಿ ಹಂಪನಗೌಡರ ಸಂಬಂಧಿಕನೋರ್ವ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಜವಳಗೇರಿ ರುದ್ರಗೌಡ ಮೃತ ವ್ಯಕ್ತಿಯಾಗಿದ್ದು, 73 ರಿಂದ 75 ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ. ಇವರು ಸಿಂಧನೂರು ಮಾಜಿ ಶಾಸಕ ಬಾದರ್ಲಿ ಹಂಪನಗೌಡರ ಸಂಬಂಧಿಕರಾಗಿದ್ದು, ವೈಷ್ಣವಿ ಗ್ರ್ಯಾಂಡ್ ಹೋಟೆಲ್ನ ಕೊಠಡಿ ಸಂಖ್ಯೆ 201ರಲ್ಲಿ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನ್ನಲಾಗ್ತಿದೆ. ಮೃತದೇಹವು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಮಾಜಿ ಶಾಸಕ ಬಾದರ್ಲಿ ಹಂಪನಗೌಡ ಹಾಗೂ ಕುಟುಂಬಸ್ಥರು ದೌಡಾಯಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹ ಹಾಗೂ ಹೋಟೆಲ್ನ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿದ್ದು, ಈ ವೇಳೆ ಮುಖಕ್ಕೆ ಮಾಸ್ಕ್ ಹಾಕಿದ್ದ ಮಹಿಳೆಯೊಬ್ಬಳು ರುದ್ರಗೌಡ ತಂಗಿದ್ದ ಕೋಣೆಗೆ ತೆರಳಿ ವಾಪಸಾಗಿರುವ ದೃಶ್ಯ ಸೆರೆಯಾಗಿದೆ ಎಂದು ಹೇಳಲಾಗ್ತಿದೆ.
ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಬಾದರ್ಲಿ ಹಂಪನಗೌಡ ಹಾಗೂ ಕುಟುಂಬಸ್ಥರು ಆರೋಪಿಸಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.