ವಿಜಯನಗರ : ಪ್ರೀತಿಸಿ ಮದುವೆಯಾದ ಮಹಿಳೆಯೊಬ್ಬರು ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ ಆರೋಪಿಸಿ ದೂರು ನೀಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಗಿರೀಶ್ ಎಂಬುವವರ ವಿರುದ್ಧ ಪತ್ನಿ ತ್ರಿವೇಣಿ ಎಂಬವರು ಈ ದೂರು ದಾಖಲಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಗಿರೀಶ್ ತಮ್ಮ ಸ್ವಂತ ಕ್ಲಿನಿಕ್ ನಡೆಸುತ್ತಿದ್ದರು. ಈ ಕ್ಲಿನಿಕ್‌ನಲ್ಲಿ ತ್ರಿವೇಣಿ ಎಂಬವರು ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಗಿರೀಶ್ ಅವರು ತ್ರಿವೇಣಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಜೊತೆಗೆ ಇವರಿಗೆ ಒಂದು ಮಗುವೂ ಇದೆ. ಆದರೆ ಈಗ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ವೈದ್ಯ ಗಿರೀಶ್ ಹಾಗೂ ಅವರ ಕುಟುಂಬದ ವಿರುದ್ಧ ತ್ರಿವೇಣಿ ದೂರು ದಾಖಲಿಸಿದ್ದಾರೆ.
ಇನ್ನು ಅಂತರ್ಜಾತೀಯ ವಿವಾಹವಾದ ಹಿನ್ನೆಲೆ ಗಿರೀಶ್ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ನಿರಂತರ ಕಿರುಕುಳ ನೀಡಿ ಈಗ ಮನೆಯಿಂದ ಹೊರ ಹಾಕಿದ್ದಾರೆ ಎಂದು ತ್ರಿವೇಣಿ ಆರೋಪಿಸಿದ್ದು, ನನಗೆ ನನ್ನ ಪತಿ ಬೇಕು ಎಂದು ಪೊಲೀಸರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಮ್ಮ ಮೇಲೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯದ ಬಗ್ಗೆ ಹಲವಾಗಲು ಪೊಲೀಸ್ ಠಾಣೆಗೆ ತ್ರಿವೇಣಿ ದೂರು ಸಲ್ಲಿಸಿದ್ದರು. ಆದರೆ, ಅಲ್ಲಿ ನ್ಯಾಯ ಸಿಗದ ಹಿನ್ನೆಲೆ ಮಗುವಿನ ಸಮೇತ ವಿಜಯನಗರ ಎಸ್.ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಎಸ್ಪಿ ಶ್ರೀಹರಿಬಾಬು ಪ್ರತಿಕ್ರಿಯಿಸಿ ಕೂಲಂಕಷವಾಗಿ ಪರಿಶೀಲಿಸಿ ಎಫ್‌ಐಆರ್ ದಾಖಲಿಸುವಂತೆ ಹಲವಾಗಲು ಪಿಎಸ್‌ಐಗೆ ಸೂಚನೆ ನೀಡಿದ್ದಾರೆ.
ಎಸ್ಪಿ ಸೂಚನೆ ಮೇರೆಗೆ ಇದೀಗ ವೈದ್ಯ ಗಿರೀಶ್ ಹಾಗೂ ಕುಟುಂಬಸ್ಥರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ವೈದ್ಯ ಗಿರೀಶ್ ಮತ್ತು ಆತನ ಇಡೀ ಕುಟುಂಬ ನಾಪತ್ತೆಯಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ : ವರದಕ್ಷಿಣೆ ಕಿರುಕುಳ: ಹಸುಳೆಯೊಂದಿಗೆ ಬಸ್ ನಿಲ್ದಾಣದಲ್ಲಿ ಮಹಿಳೆಯ ಪರದಾಟ