ಬಳ್ಳಾರಿ: ಸರ್ಕಾರವು ಕಾರ್ಮಿಕರಿಗೆ ಯಾವುದನ್ನೂ ಸುಮ್ಮನೆ ಕೊಟ್ಟಿಲ್ಲ. ಎಲ್ಲವೂ ಹೋರಾಟದಿಂದಲೇ ಬಂದಿದೆ ಎಂದು ಎಸ್ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಎಐಟಿಯುಸಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಥಮ ಕಾರ್ಮಿಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೊಡ್ಡ ಉದ್ಯಮಿಗಳು ಹೇಳಿದಂತೆ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ದೂರಿದರು. ಕಾರ್ಮಿಕರು ಪ್ರಜ್ಞಾವಂತಿಕೆಯ ಪಾತ್ರ ವಹಿಸಬೇಕಿದ್ದು, ಕಾರ್ಮಿಕರ ಕೆಲಸವನ್ನು ಕೇವಲ ಸಂಬಳಕ್ಕಾಗಿ ಮಾಡುತ್ತಿಲ್ಲ ಅದು ಅವರ ಬದುಕು. ಸರ್ಕಾರಗಳು ಅವರ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ದುಡಿಯುವ ಕಾರ್ಮಿಕರ ಮೇಲೆ ದಾಳಿ ಮಾಡುತ್ತಲೇ ಇದೆ ಎಂದರು. ನಮ್ಮ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳುತ್ತಿದ್ದು, ನಮ್ಮ ಸೌಲಭ್ಯಗಳನ್ನು ನಮಗೆ ಕೊಡುತ್ತಿಲ್ಲ ಎಂದರು.