ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ನಾಮಪತ್ರ ಸಲ್ಲಿಸಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತು ಬಂಡಾಯ ಅಭ್ಯರ್ಥಿಗಳ ಅಫಿಡವಿಟ್ ಆ ಕ್ಷೇತ್ರದ ಮತದಾರರಲ್ಲಿ ಅಚ್ಚರಿ ಮೂಡಿಸುತ್ತಿದೆ.
ಅನರ್ಹ ಶಾಸಕ ಆನಂದ್ ಸಿಂಗ್ ಅವರ ಆದಾಯವು ಒಂದೇ ವರ್ಷದಲ್ಲಿ 33 ಕೋಟಿ ರೂ.ಗಳಿಗೆ ಏರಿಕೆಯಾದ್ರೂ ಕೂಡ ಆದಾಯ ತೆರಿಗೆಯಲ್ಲಿ ಸತತ ಐದು ವರ್ಷಗಳ ಕಾಲ ನಷ್ಟದಲ್ಲಿದ್ದಾರೆಂದು ತಿಳಿಸಿದ್ದಾರೆ. 2014 ರಿಂದ 2019ರವೆಗೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆಂಬ ಮಾಹಿತಿಯು ಆನಂದ್ ಸಿಂಗ್ ಸಲ್ಲಿಸಿದ ಅಫಿಡವಿಟ್ನಲ್ಲಿದೆ. ಅಲ್ಲದೇ, 12 ಕೋಟಿ ರೂಗೂ ಹೆಚ್ಚಿನ ಸಾಲವನ್ನು ಅವರು ಹೊಂದಿದ್ದಾರೆ ಎಂದು ತೋರಿಸಿದ್ದಾರೆ.
2018ರಲ್ಲಿ ಅವರ ಒಟ್ಟಾರೆ ಆಸ್ತಿ ಮೌಲ್ಯ 71.36 ಕೋಟಿ ರೂ ಇತ್ತು. 2019ರಲ್ಲಿ ಅದು 104.42 ಕೋಟಿ ರೂ ನಷ್ಟಾಗಿದೆ. ಇನ್ನೂ, ವಂಚನೆ ಸೇರಿದಂತೆ ಅಂದಾಜು 18 ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ. ಲೋಕಾಯುಕ್ತ ಕಚೇರಿಯಲ್ಲಿ 11, ಸಿಬಿಐ ಮತ್ತು ಎಸಿಬಿಯಲ್ಲಿ ತಲಾ 3, ಅರಣ್ಯ ಇಲಾಖೆಯಲ್ಲಿ 1 ಪ್ರಕರಣವಿದೆ. ಬಿಎಂಡಬ್ಲ್ಯೂ, ರೇಂಜ್ ರೋವರ್ ಸೇರಿದಂತೆ ಒಟ್ಟು 19 ಐಷಾರಾಮಿ ವಾಹನಗಳಿವೆ. ಅವರ ಪತ್ನಿ ಲಕ್ಷ್ಮಿ ಸಿಂಗ್ 72.29 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗೆ ಒಡತಿಯಾಗಿದ್ದಾರೆ.
ರಾಜ ವಂಶಸ್ಥರೂ ಕೂಡಾ ಸಾಲದ ಸುಳಿಯಲ್ಲಿ!
ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂಡೂರು ರಾಜವಂಶಸ್ಥ ವೆಂಕಟರಾವ ಘೋರ್ಪಡೆ ಅವರೂ ಕೂಡ ಅಂದಾಜು 1.96 ಕೋಟಿ ರೂ. ಕೈ ಸಾಲ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. 1.57 ಕೋಟಿ ರೂ.ಚರಾಸ್ತಿ, 5.87 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ. 600 ಗ್ರಾಂ ಚಿನ್ನ, 10 ಕಿಲೋ ಬೆಳ್ಳಿ ಹೊಂದಿದ್ದಾರೆ. ಇವರ ಪತ್ನಿ ವಿದ್ಯುಲ್ಲತಾ ಬಳಿ ಚಿನ್ನಾಭರಣಗಳಿಲ್ಲ. ಆದ್ರೆ, 2.28 ಲಕ್ಷ ರೂ.ಸಾಲ ಇದೆ.
ಮಾಜಿ ಸಚಿವರಿಗೆ ಸ್ವಂತ ಕಾರಿಲ್ಲವಂತೆ:
ಜಿಲ್ಲೆಯ ಕೂಡ್ಲಿಗಿಯ ನಿವಾಸಿಯಾದ ಎನ್.ಎಂ.ಬಿ.ನಬಿಯವ್ರು, ಸದ್ಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದಾರೆ. ಮಾಜಿ ಸಚಿವರಾದ ಇವರ ಬಳಿ ಸ್ವಂತ ಕಾರೇ ಇಲ್ವಂತೆ. ಬ್ಯಾಂಕಿನಲ್ಲೂ ಠೇವಣೆಯೂ ಇಲ್ಲ. 12.74 ಲಕ್ಷ ಚರಾಸ್ತಿ, 1.48 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 300 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ ಆಭರಣಗಳಿವೆ.
ಬಿಜೆಪಿ ಬಂಡಾಯ ಅಭ್ಯರ್ಥಿ ಕೋಟ್ಯಧಿಪತಿ:
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕವಿರಾಜ ಅರಸ ಕೋಟ್ಯಧಿಪತಿಯಾಗಿದ್ದಾರೆ. 6.99 ಕೋಟಿ ರೂ.ಗಳ ಮೌಲ್ಯದ ಚರಾಸ್ತಿ, 29.23 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 10.42 ಕೆ.ಜಿ. ಚಿನ್ನಾಭರಣ ಇದೆ. ಪತ್ನಿ ಬಳಿ 30 ಗ್ರಾಂ ಬಂಗಾರವಿದೆ. 16 ಟಿಪ್ಪರ್ ಸೇರಿದಂತೆ 70 ವಾಹನಗಳನ್ನು ಹೊಂದಿರುವ ಇವರು ಬೆಂಗಳೂರಿನಲ್ಲಿ 14 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆಂದು ಅವರು ಸಲ್ಲಿಸಿದ ಅಫಿಡವಿಟ್ನಲ್ಲಿ ಮಾಹಿತಿಯಿದೆ.