ಹೊಸಪೇಟೆ(ವಿಜಯನಗರ) : ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದ ಗಲಾಟೆ ಪ್ರಕರಣವೊಂದರ ಆರೋಪಿಯನ್ನ ಇದೀಗ ಪೊಲೀಸರು ಮತ್ತೆ ಬಂಧಿಸಿದಾರೆ. ನಗರದ ಸಬ್‌ಜೈಲ್ ಮುಂದೆ ಮಂಗಳವಾರ ರಾತ್ರಿ ಆರೋಪಿ ತಪ್ಪಿಸಿಕೊಂಡಿದ್ದು, ಇಂದು ಮಧ್ಯಾಹ್ನ ಆತನನ್ನು ನಗರದಲ್ಲಿ ಬಂಧಿಸಲಾಗಿದೆ. ಕಮಲಾಪುರದ ನಿವಾಸಿ ರುದ್ರೇಶ್ (27) ಎಂಬಾತ ಮತ್ತೆ ಬಂಧನಕ್ಕೊಳಗಾಗಿರುವ ಆರೋಪಿ.
ರುದ್ರೇಶ್ ಗಲಾಟೆಯಲ್ಲಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪದಡಿಯಲ್ಲಿ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ರಾತ್ರಿ ಹೊತ್ತಿನಲ್ಲಿ ನಗರದ ಸಬ್ಜೈಲ್ನಲ್ಲಿ ಆರೋಪಿಯನ್ನು ಬಿಡಲು ಕಮಲಾಪುರದ ಪೊಲೀಸರು ಬಂದಿದ್ದರು.
ಜೈಲಿನ ಗೇಟ್ ತೆಗೆಯುವಾಗ ಆರೋಪಿ ಪೊಲೀಸರನ್ನು ದಬ್ಬಿ ಓಡಿದ್ದಾನೆ. ಆರೋಪಿಯ ಪತ್ತೆಗಾಗಿ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈಗ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಬಂಧನ ಕುರಿತು ಪಟ್ಟಣ ಪೊಲೀಸ್ ಠಾಣೆಯ ಪಿಐ ಎಂ.ಶ್ರೀನಿವಾಸ ಅವರು ಈಟಿವಿ ಭಾರತಕ್ಕೆ ಖಚಿತಪಡಿಸಿದ್ದಾರೆ.
ಸದ್ಯ ಕಮಲಾಪುರದ ಪಿಎಸ್ಐ ಆಗಿ ಅರುಣ್‌ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಬ್‌ಜೈಲ್ ಮುಂದೆ ಪರಾರಿಯಾಗುವುದು ಅಷ್ಟು ಸುಲಭವಲ್ಲ. ಯಾಕೆಂದರೆ, ಜೈಲಿನ ಪಕ್ಕವೇ ಗ್ರಾಮೀಣ ಪೊಲೀಸ್ ಠಾಣೆ ಇದೆ.
ಹತ್ತಾರು ಪೊಲೀಸರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೇ, ಗ್ರಾಮೀಣ ಪೊಲೀಸ್ ಠಾಣೆಯ ಆವರಣದ ಮುಂದೆ ಓಡಿ ಹೋಗ ಬೇಕಾಗುತ್ತದೆ. ಇಷ್ಟೆಲ್ಲ ಇದ್ದರೂ ಆರೋಪಿ ತಪ್ಪಿಸಿಕೊಂಡು ಹೋಗಿರುವುದು ಅನುಮಾನ ಮೂಡಿಸುವಂತಿದೆ.