ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ಬರುವ ಬಡ ಮತ್ತು ಕೂಲಿಕಾರ್ಮಿಕ ರೋಗಿಗಳಿಗೆ ಅನ್ಯಾಯ ಆಗುತ್ತಿರೋದನ್ನ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಜಿಲ್ಲಾ ಘಟಕದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಆವರಣದಲ್ಲಿನ ನಿರ್ದೇಶಕರ ಕಚೇರಿ ಎದುರು ಎಬಿವಿಪಿ ನಗರ ಘಟಕದ ಕಾರ್ಯದರ್ಶಿ ಹರ್ಷನಾಯಕ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜಮಾಯಿಸಿ ಕೆಲಕಾಲ ಘೋಷಣೆ ಕೂಗಿ ಬಳಿಕ ನಿರ್ದೇಶಕ ಡಾ.ಸಿ.ದೇವಾನಂದ ಅವರಿಗೆ ಮನವಿ ಸಲ್ಲಿಸಿದ್ರು.
ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯಾದ ವಿಮ್ಸ್ನಲ್ಲಿ ಬಡ, ಕೂಲಿ ಕಾರ್ಮಿಕ ರೋಗಿಗಳಿಗೆ ಜೀವ ಹಿಂಡುತ್ತಿದ್ದಾರೆ. ನಿನ್ನೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದ ಯುವತಿ ತಂದೆಗೆ ವ್ಹೀಲ್ಚೇರ್ ನೀಡದ ಕಾರಣ, ಆಕೆಯನ್ನು ಹೆಗಲ ಮೇಲೆ ಹೊತ್ತೊಯ್ದ ಘಟನೆಯಿಂದ ಆರೋಗ್ಯ ಇಲಾಖೆಯು ತಲೆ ತಗ್ಗಿಸುವಂತಾಗಿದೆ. ಒಬ್ಬ ಸಣ್ಣ ಬಡರೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದ್ರು ಈ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ನೀಡಬೇಕಾಗುತ್ತದೆ. ಆದರೆ, ಇಲ್ಲಿರುವ ನಿರ್ದೇಶಕರು ಕಣ್ಣು ಮುಚ್ಚಿ ಕುಳಿತಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ತಕ್ಷಣ ವಿಮ್ಸ್ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಚಿಕಿತ್ಸೆ ನೀಡಲು ಬಡರೋಗಿಗಳಿಗೆ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಮುಂದಿನ ದಿನಮಾನಗಳಲ್ಲಿ ಇದೇ ರೀತಿಯಾಗಿ ಮುಂದುವರಿದರೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.