ಬಳ್ಳಾರಿ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ (ಜೆಎಂಎಫ್ಸಿ) ಡಿಜಿಟಲೀಕರಣ ಸ್ಪರ್ಶ ನೀಡಲಾಗಿದ್ದು, ಘನ ನ್ಯಾಯಾಲಯದ ಮುಂದೆ ಯಾವುದೇ ಪ್ರಕರಣಗಳು ವಿಚಾರಣೆಗೆ ಬರುವ ಮುನ್ನವೇ ಕಕ್ಷಿದಾರರು, ವಕೀಲರು ಪ್ರಕರಣದ ಸಂಖ್ಯೆಯನ್ನು ಕಂಪ್ಯೂಟರ್ ಪರದೆಯ ಮೇಲೆ ಬಿತ್ತರವಾಗುವುದನ್ನು ವೀಕ್ಷಣೆ ಮಾಡಿಕೊಂಡೇ ಆಯಾ ನ್ಯಾಯಾಲಯದೊಳಗೆ ಪ್ರವೇಶಿಸಬಹುದಾಗಿದೆ.
ಸುಪ್ರೀಂಕೋರ್ಟ್ ಆದೇಶಾನುಸಾರವಾಗಿ, ಜೆಎಂಎಫ್ಸಿ ನ್ಯಾಯಾಲಯದಲ್ಲಿ ಬರುವ ಅಂದಾಜು ಹದಿನೈದು ನ್ಯಾಯಾಲಯಗಳ ಪ್ರವೇಶದ್ವಾರ ಬಳಿ ಈ ಎಲ್ಇಡಿ ಪರದೆಯ ಕಂಪ್ಯೂಟರ್ ಅನ್ನು ಗೋಡೆಗೆ ನೇತುಹಾಕಲಾಗಿದೆ. ಇದರಿಂದಾಗಿ ವಕೀಲರ ಮತ್ತು ಕಕ್ಷಿದಾರರ ಮಧ್ಯೆ ಸಂವಹನ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
ಬಳ್ಳಾರಿಯಲ್ಲಿ ಒಟ್ಟು ಹದಿನೈದು ನ್ಯಾಯಾಲಯಗಳಿವೆ. ಅವುಗಳಲ್ಲಿ ನಾಲ್ಕು ಜಿಲ್ಲಾ ನ್ಯಾಯಾಲಯಗಳ ಪೈಕಿ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ, ಒಂದನೇ, ಮೂರನೇ ಹಾಗೂ ನಾಲ್ಕನೇಯ ನ್ಯಾಯಾಲಯ, ಜಿಲ್ಲಾ ವಾಣಿಜ್ಯ ನ್ಯಾಯಾಲಯ. ಹಾಗೆಯೇ ಮೂರು ಹಿರಿಯ ಶ್ರೇಣಿಯ ನ್ಯಾಯಾಲಯಗಳ ಪೈಕಿ ಪ್ರಧಾನ ಹಿರಿಯ ಸಿವಿಲ್ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ, ಒಂದನೇ, ಎರಡನೇ ಹೆಚ್ಚುವರಿ ನ್ಯಾಯಾಲಯಗಳಲ್ಲಿ ಡಿಜಿಟಲೀಕರಣದ ಪರದೆಯು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರೋದನ್ನು ಕಾಣಬಹುದಾಗಿದೆ.
ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಅಂಕಲಯ್ಯ ಅವರು ಮಾತನಾಡಿ, ವಕೀಲರು, ಕಕ್ಷಿದಾರರ ನಡುವೆ ಡಿಜಿಟಲೀಕರಣದ ಮಾಹಿತಿಯು ಪೂರಕವಾಗಿದೆ. ಕಕ್ಷಿದಾರರು ವೃಥಾ ಕೋರ್ಟಿಗೆ ಬರೋದು ತಪ್ಪುತ್ತದೆ. ವಕೀಲರು ಕೂಡ ತಮ್ಮ - ತಮ್ಮ ಪ್ರಕರಣ ಗಳ ವಿಚಾರಣೆ ಸಮಯ ಹಾಗೂ ಸಂಖ್ಯೆಯನ್ನು ಪರದೆ ಮೇಲೆ ಬಿತ್ತರವಾಗೋದರಿಂದ ವಾದ, ಪ್ರತಿವಾದ ಮಂಡನೆ ಮಾಡಬಹುದು ಎಂದರು.
ಬಳ್ಳಾರಿ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಎಂ.ಪುಷ್ಪಲತಾ ಮಾತನಾಡಿ, ಈ ಡಿಜಿಟಲೀಕರಣ ಪರದೆಯ ಮೇಲೆ ಕೌಟುಂಬಿಕ ನ್ಯಾಯಾಲಯದ ಯಾವುದೇ ಪ್ರಕರಣಗಳನ್ನು ಬಿತ್ತರ ಮಾಡೋದನ್ನು ನಿಷೇಧಿಸಲಾಗಿದೆ. ಈ ನ್ಯಾಯಾಲಯದಲ್ಲಿ ಕೌಟುಂಬಿಕ ಕಲಹ ಸೇರಿದಂತೆ ಇನ್ನಿತರ ಪ್ರಕರಣಗಳೇ ಹೆಚ್ಚಿರೋದರಿಂದ ಅವುಗಳನ್ನು ಅತ್ಯಂತ ಸೂಕ್ಷ್ಮ ಪ್ರಕರಣಗಳು ಎಂದು ಪರಿಗಣಿಸಲಾಗುತ್ತೆ, ಇದನ್ನು ಸುಪ್ರೀಂಕೋರ್ಟಿನ ಆದೇಶಾನುಸಾರವಾಗಿ ಪಾಲನೆ ಮಾಡಲಾಗಿದೆ ಎಂದರು.