ಬಳ್ಳಾರಿ: ಕೇಂದ್ರ ಸರ್ಕಾರದ ಜನ, ಕಾರ್ಮಿಕ, ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಜನವರಿ 8 ಹಮ್ಮಿಕೊಳ್ಳಲಾಗಿದೆ ಎಂದು ಎ.ಐ.ಟಿ.ಯು.ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗುತ್ತಿದೆ. ಕಾರ್ಮಿಕ ಕಾಯಿದೆಗಳನ್ನು ಕಾರ್ಪೊರೇಟ್ಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಡಲೀಕರಣ ಮಾಡಲಾಗುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ಮೋದಿ ಸರ್ಕಾರ ಕಸಿದುಕೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ದೇಶದ ಸಂಪತ್ತು ಆಗಿರುವ ಬಿ.ಎಸ್.ಎನ್.ಎಲ್ ಅನ್ನು ಖಾಸಗಿ ಉದ್ಯಮದಾರರಿಗೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಬಿ.ಎಸ್.ಎನ್.ಎಲ್ ನಷ್ಟಯಲ್ಲಿದೆ ಎಂದು ತೋರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬಳ್ಳಾರಿ ಜಿಲ್ಲೆಯ ಎನ್.ಎಂ.ಡಿ.ಸಿ ದೋಣಿಮಲೈ ಘಟಕವು ಸಹ ಮುಚ್ಚಿಹೋಗುವಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶ ಮಾಡಿ ಸರಿಪಡಿಸಲು ಮುಂದಾಗಬೇಕು. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬಳ್ಳಾರಿ ನೇತೃತ್ವದಲ್ಲಿ ಐ.ಎನ್.ಟಿ.ಯು.ಸಿ, ಎ.ಐ.ಟಿ.ಯು.ಸಿ, ಸಿ.ಐ.ಟಿಯು, ಎ.ಐ.ಯು.ಟಿ.ಯು.ಸಿ ಎಲ್ಲಾ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುತ್ತವೆ ಎಂದು ತಿಳಿಸಿದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಸತ್ಯಬಾಬು, ಎ.ಆರ್ ಇಸ್ಮಾಯಿಲ್, ಜಯಕುಮಾರ್, ಭಾಸ್ಕರ್ ರೆಡ್ಡಿ, ಸೋಮಶೇಖರ್, ದೇವದಾಸ್, ಚನ್ನಪ್ಪ ಇನ್ನಿತರರು ಹಾಜರಿದ್ದರು.