ಬಳ್ಳಾರಿ: ಉತ್ತರಾಖಂಡ್ ತೀರ್ಥ ಯಾತ್ರೆಗೆ ತೆರಳಿದ್ದ 18 ಮಂದಿ ಪೈಕಿ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಒಂದು ಪಾಸಿಟಿವ್ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದ ವ್ಯಕ್ತಿಯ ಪತ್ನಿಯು ತೀರ್ಥಯಾತ್ರೆಯಿಂದ ತಂದಂತಹ ದೇವರ ಪ್ರಸಾದವನ್ನ ಹಂಚಿದ್ದರು. ಆಕೆಯು ಅಂದಾಜು 91 ಮಂದಿಗೆ ಪ್ರಸಾದ ಹಂಚಿರುವ ಸಾಧ್ಯತೆ ಇದೆ. ಪ್ರೈಮರಿ ಸಂಪರ್ಕ ಹೊಂದಿದ್ದ 57 ಮಂದಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದ 34 ಮಂದಿಯನ್ನು ಜಿಲ್ಲಾಡಳಿತ ಪತ್ತೆಹಚ್ಚಿ ಕ್ವಾರೈಂಟೈನ್ ಮಾಡಿದೆ.
ಕಳೆದೆರಡು ದಿನಗಳ ಹಿಂದೆ ಬಳ್ಳಾರಿ ಜಾಗೃತಿ ನಗರದಲ್ಲಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ತೀರ್ಥಯಾತ್ರೆ ಪ್ರಸಾದ ತಿಂದವರೆಲ್ಲರನ್ನೂ ಕೂಡ ಈಗ ಕ್ವಾರೈಂಟೈನಲ್ಲಿಡಲಾಗಿದೆ. ಉತ್ತರಾಖಂಡ್ ರಾಜ್ಯದ ಪ್ರವಾಸಕ್ಕೆ ಹೋಗಿದ್ದ 18 ಮಂದಿಯ ಪೈಕಿ 14 ಮಂದಿ ಬಳ್ಳಾರಿ ನಗರದ ನಿವಾಸಿಗಳಾಗಿದ್ದರು.
4 ಮಂದಿ ನೆರೆಯ ಆಂಧ್ರಪ್ರದೇಶದ ಕಣೇಕಲ್ ಮೂಲದವರಾಗಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಬಳ್ಳಾರಿಗೆ ಆಗಮಿಸಿದ್ದರು. ಉತ್ತರಾಖಂಡ್ ಪ್ರವಾಸ ಮುಗಿಸಿ ಬಂದ ಹಿನ್ನೆಲೆ ಅಕ್ಕಪಕ್ಕದ ಮನೆಯವರಿಗೆ ಪ್ರಸಾದ ಹಂಚಿದ್ದರು. ಆದರೆ, ಸೋಂಕಿತನ ಪತ್ನಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ. ಈಕೆ ಕೈಯಿಂದ ಪ್ರಸಾದ ಸ್ವೀಕರಿಸಿದವರು ನಿಟ್ಟುಸಿರು ಬಿಟ್ಟಿದ್ದಾರೆ.