ಬಳ್ಳಾರಿ: ಹರಪನಹಳ್ಳಿ ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಅಂದಾಜು 49 ಮಂದಿ ಕೊರೊನಾ ಸೇನಾನಿಗಳಿಗೆ ಸೋಂಕಿರೋದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಪನಹಳ್ಳಿ ತಾಲೂಕಿನಲ್ಲಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ಹೆಲ್ತ್ ವರ್ಕರ್ಸ್ ಹೊರತುಪಡಿಸಿ ಉಳಿದೆಲ್ಲಾ ತಾಲೂಕಿನಲ್ಲೂ ಸೋಂಕು ಪತ್ತೆಯಾಗಿವೆ. ಅವರೆಲ್ಲರೂ ಕೂಡ ಸೋಂಕಿನಿಂದ ಗುಣಮುಖರಾಗುವ ಹಂತಕ್ಕೆ ತಲುಪಿದ್ದಾರೆಂದು ತಿಳಿಸಿದ್ದಾರೆ.
ಈ 49 ಮಂದಿ ಪೈಕಿ ಅಂದಾಜು 18 ಮಂದಿ ವೈದ್ಯರಿದ್ದಾರೆ. ಇದಲ್ಲದೇ, ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿನ ವೈದ್ಯರು, ಆರೋಗ್ಯ ಸಹಾಯಕಿಯರಲ್ಲೂ ಸೋಂಕು ಪತ್ತೆಯಾಗಿದೆ. ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಆರೋಗ್ಯ ಸಹಾಯಕರು, ಸಹಾಯಕಿಯರನ್ನೂ ವೈರಾಣು ಬಾಧಿಸಿದೆ. ಹೀಗಾಗಿ, ವೈದ್ಯರು ಮತ್ತು ಆರೋಗ್ಯ ಸಹಾಯಕರು, ಸಹಾಯಕಿಯರು ಯಾರೂ ಕೂಡ ಧೃತಿಗೆಡಬಾರದು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.