ಬಳ್ಳಾರಿ: ಗಣಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಕೊಂಡಿ ಮುಂದುವರೆದಿದ್ದು ಮತ್ತೆ ನಾಲ್ವರಿಗೆ ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿದೆ.
ಜಿಂದಾಲ್ ಸಮೂಹ ಸಂಸ್ಥೆಯಲ್ಲಿರುವ ಕೊರೆಕ್ಸ್ ಘಟಕದಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂಡೂರು ತಾಲೂಕಿನ ತಾಳೂರು ಗ್ರಾಮದ 36 ವರ್ಷದ ಮಹಿಳೆ, ಶಂಕರಗುಡ್ಡ ಕಾಲೊನಿಯ 34 ವರ್ಷದ ಪುರುಷ, ವಿ.ವಿ ನಗರದ 42 ವರ್ಷದ ಹಾಗೂ 40 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ತಮಿಳುನಾಡು ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಈ ನಾಲ್ವರಿಗೆ ಸೋಂಕು ದೃಢವಾಗಿದ್ದು ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ನಿನ್ನೆ ಕೂಡಾ ಜಿಂದಾಲ್ನಲ್ಲಿ 2 ಪ್ರಕರಣಗಳು ವರದಿಯಾಗಿತ್ತು. ಜಿಂದಾಲ್ನಲ್ಲೇ ಈಗ ಪ್ರಕರಣಗಳ ಸಂಖ್ಯೆ 11 ಕ್ಕೆ ಏರಿದೆ. ಇದುವರೆಗೂ ಜಿಲ್ಲೆಯಲ್ಲಿ 43 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.