ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಡಗಾರನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿದ್ದ ಕುರಿಹಟ್ಟಿ ಮೇಲೆ ಚಿರತೆಗಳು ದಾಳಿ ನಡೆಸಿದ ಪರಿಣಾಮ 25 ಮೇಕೆ- ಕುರಿಗಳು ಸಾವನ್ನಪ್ಪಿವೆ.
ದಡಗಾರನಹಳ್ಳಿ ಗ್ರಾಮದ ಹೊಳಲು ಗೋಣೆಪ್ಪ, ರಾಜಪ್ಪ ಎಂಬುವರಿಗೆ ಸೇರಿದ್ದ ಈ ಕುರಿಹಟ್ಟಿಗೆ ಗುರುವಾರ ತಡರಾತ್ರಿ ಚಿರತೆಗಳು ನುಗ್ಗಿ 2-3 ತಿಂಗಳ ವಯಸ್ಸಿನ 18 ಕುರಿಮರಿಗಳು, 7 ಮೇಕೆಗಳು ಸೇರಿ ಒಟ್ಟು 25 ಕುರಿ-ಮೇಕೆಗಳನ್ನು ಬಲಿ ಪಡೆದಿವೆ. ಮಾರನೇ ದಿನ ಬೆಳಗ್ಗೆ ಮಾಲೀಕ ರಾಜಪ್ಪ ಕುರಿಹಟ್ಟಿಯ ಬಳಿ ಹೋದಾಗ ಕುರಿ ಮತ್ತು ಮೇಕೆಗಳು ಮೃತಪಟ್ಟಿರುವುದನ್ನು ಕಂಡು ಕಂಗಾಲಾಗಿದ್ದಾರೆ.
ಇದನ್ನು ಓದಿ: ಕಾರು ಅಡ್ಡಗಟ್ಟಿ ದರೋಡೆ ಪ್ರಕರಣ: ಪೊಲೀಸರಿಗೆ ದೂರು ನೀಡಿದವನೇ ಪ್ರಮುಖ ಆರೋಪಿ!
ಜೀವನಕ್ಕೆ ಆಧಾರವಾಗಿದ್ದ ಕುರಿಗಳು ಚಿರತೆ ಪಾಲಾಗಿದ್ದು, ಜೀವನ ನಡೆಸೋದು ಕಷ್ಟವಾಗಿದೆ. ತಮಗೆ ಪರಿಹಾರ ನೀಡಬೇಕೆಂದು ಕುರಿಗಳ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ನೀಡಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪಶುವೈದ್ಯಾಧಿಕಾರಿ ಡಾ. ಶ್ರೀದೇವಿ ಕುರಿ ಮತ್ತು ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಚಿರತೆ ಹಾವಳಿ ಹಿನ್ನೆಲೆ, ದಡಗಾರನಹಳ್ಳಿ, ಕಾಯಕದಹಳ್ಳಿ, ಶೃಂಗಾರತೋಟ, ಬಾಗಳಿ ಕೂಲಹಳ್ಳಿ ಕೋಡಿಹಳ್ಳಿ, ಕಣವಿಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ರೈತರು ಹೊಲಗಳಿಗೆ ತೆರಳಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಚಿರತೆಗಳನ್ನು ಸೆರೆ ಹಿಡಿಯಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ರಾಜಪ್ಪ, ಬೀಚಿ ಅಭಿಮಾನಿ ಬಳಗದ ಅಧ್ಯಕ್ಷ ಶೃಂಗಾರದೋಟ ನಿಂಗರಾಜ ಆಗ್ರಹಿಸಿದ್ದಾರೆ.